ಬೆಂಗಳೂರು: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಆರು ವಿದ್ಯಾರ್ಥಿಗಳು ಚೆನ್ನೈ ವಲಯಕ್ಕೇ ಟಾಪರ್ ಆಗುವ ಮೂಲಕ ಅಪ್ರತಿಮ ಸಾಧನೆ ಮೆರೆದಿದ್ದಾರೆ.
ತುಮಕೂರು ಜಿಲ್ಲೆ ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಯಶಸ್.ಡಿ ಕರ್ನಾಟಕಕ್ಕೆ ಮಾತ್ರವಲ್ಲದೆ, ಚೆನ್ನೈ ವಲಯಕ್ಕೇ ಪ್ರಥಮ ಸ್ಥಾನ ಪಡೆದ್ದಿದ್ದಾನೆ. ಅಖಿಲ ಭಾರತ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾನೆ. ಮೊದಲ ಸ್ಥಾನಗಳಿಸಿರುವ ವಿದ್ಯಾರ್ಥಿಗಳು 500 ಕ್ಕೆ 499 ಅಂಕಗಳನ್ನು ಪಡೆದಿದ್ದಾರೆ.
ಯಶಸ್ 500 ಕ್ಕೆ 498 ಅಂಕಗಳಿಸಿದ್ದರೆ, ರಾಜ್ಯದ ಇತರ ಐವರು 497 ಅಂಕಗಳನ್ನು ಗಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಚೆನ್ನೈ ವಲಯ ದೇಶದಲ್ಲಿ ಶೇ 99 ರಷ್ಟು ಫಲಿತಾಂಶ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರೆ, ತಿರುವನಂತಪುರ ವಲಯ ಶೇ 99.85 ಗಳಿಸುವ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಧಾರವಾಡದ ಶ್ರೀಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನ ಗಿರಿಜಾ ಎಂ. ಹೆಗಡೆ, ಬೆಂಗಳೂರಿನ ಪ್ರೆಸಿಡೆನ್ಸಿ ಸ್ಕೂಲ್‌ನ ಐಶ್ವರ್ಯ ಹರಿಹರನ್ ಅಯ್ಯರ್ ಮತ್ತು ಎನ್. ದಿಶಾ ಚೌಧರಿ, ಬೆಂಗಳೂರು ಉಲ್ಲಾಳದ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ ಪೃಥ್ವಿ ಪಿ ಶೆಣೈ, ಬೆಂಗಳೂರು ಜೆಪಿ.ನಗರ ಚೈತನ್ಯ ಟೆಕ್ನೋ ಸ್ಕೂಲ್‌ನ ಕೆ.ವಿ.ಪ್ರಣವ್ 500 ಕ್ಕೆ 497 ಅಂಕಗಳಿಸಿರುವ ವಿದ್ಯಾರ್ಥಿಗಳು.
ಚೆನ್ನೈ ವಲಯದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಪುದುಚೇರಿ, ಅಂಡಮಾನ್– ನಿಕೋಬರ್ ಮತ್ತು ಡಿಯು ಡಾಮನ್ ಸೇರಿವೆ.
ಈ ಬಾರಿ ದೇಶದಲ್ಲಿ ಒಟ್ಟು 17,74,299 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿದ್ದು, 17,61,078 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ 91.10 ಉತ್ತೀರ್ಣರಾಗಿದ್ದಾರೆ. ಫಲಿತಾಂಶ ಕಳೆದ ಸಾಲಿಗಿಂತ ಶೇ 4.40 ರಷ್ಟು ಹೆಚ್ಚಳವಾಗಿದೆ. 2018 ರಲ್ಲಿ ಶೇ 86.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
‘ಐಐಟಿಯೇ ನನ್ನ ಗುರಿ’ - ಡಿ.ಯಶಸ್, 498/500
‘ಫಲಿತಾಂಶ ಕಂಡು ಖುಷಿಯಾಗಿದೆ. ಶಾಲೆಗಳಲ್ಲಿ ಶಿಕ್ಷಕರು ಮಾಡುತ್ತಿದ್ದ ಪಾಠ ಗಮನವಿಟ್ಟು ಆಲಿಸುತ್ತಿದ್ದೆ. ತಿಳಿಯದ ವಿಷಯಗಳನ್ನು ಅವರ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದೆ. ಓದಿಗೆ ನಿರ್ದಿಷ್ಟ ಸಮಯದ ಪಟ್ಟಿ ಮಾಡಿಕೊಂಡಿರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಓದುತ್ತಿದ್ದೆ’ ಎಂದು ವಿದ್ಯಾರ್ಥಿ ಡಿ.ಯಶಸ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಿಯುಸಿಯಲ್ಲಿ ಪಿಸಿಎಂಸಿ (ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್) ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವೈದ್ಯನಾಗಬೇಕು, ಎಂಜಿನಿಯರ್ ಆಗಬೇಕು ಎಂಬುದು ಇಷ್ಟವಿಲ್ಲ. ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಬೇಕು (ಐಐಟಿ) ಎಂಬ ಆ ಗುರಿ ಇದೆ’ ಎಂದು ತಿಳಿಸಿದರು.
‘ವಿಜ್ಞಾನಿಯಾಗುವೆ’-ಗಿರಿಜಾ ಎಂ. ಹೆಗಡೆ, 497/500
‘ವಿಜ್ಞಾನಿ ಆಗಬೇಕು ಎಂಬ ಗುರಿ ಹೊಂದಿದ್ದೇನೆ. ಈಗಲೇ ಐಐಟಿ ಮತ್ತು ನೀಟ್ ಪ್ರವೇಶ ಪರೀಕ್ಷೆಗೆ ವಿಶೇಷ ತರಬೇತಿ ಪಡೆಯುತ್ತಿದ್ದೇನೆ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.