ADVERTISEMENT

ಸಿಬಿಎಸ್‌ಇಗೆ ಎನ್‌ಒಸಿ: ಮನವಿ ಪರಿಗಣಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 16:40 IST
Last Updated 10 ಜೂನ್ 2024, 16:40 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜ್ಯ ಪಠ್ಯಕ್ರಮದಿಂದ ಕೇಂದ್ರ ಪಠ್ಯಕ್ರಮಕ್ಕೆ (ಸಿಬಿಎಸ್‌ಇ) ಸಂಯೋಜನೆ ಹೊಂದಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದಕ್ಕೆ; ಹಿಂದಿನ ಮೂರು ವರ್ಷಗಳ ಲೆಕ್ಕ ಪರಿಶೋಧನಾ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಬಲವಂತಪಡಿಸಬಾರದು. ಎನ್‌ಒಸಿ ನೀಡುವಂತೆ ಕೋರಿ ಮೈಸೂರಿನ ಬೆಳವಾಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಲ್ಲಿಸಿರುವ ಮನವಿಯನ್ನು ಕಾನೂನು ರೀತ್ಯಾ ಪರಿಗಣಿಸಬೇಕು’ ಎಂದು ಹೈಕೋರ್ಟ್‌, ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ.

ರಾಷ್ಟ್ರೋತ್ಥಾನ ಪರಿಷತ್‌ ಪ್ರಧಾನ ಕಾರ್ಯದರ್ಶಿ ಎನ್.ದಿನೇಶ್ ಹೆಗ್ಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ಎನ್‌ಒಸಿ ಮಂಜೂರು ಮಾಡುವಂತೆ ಕೋರಿ ರಾಷ್ಟ್ರೋತ್ಥಾನ ಪರಿಷತ್ 2024ರ ಮೇ 20ರಂದು ಸಲ್ಲಿಸಿರುವ ಮನವಿಯನ್ನು ಕಾನೂನು ರೀತ್ಯಾ ಪರಿಗಣಿಸಿ, ಎರಡು ವಾರಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಿ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿರುವ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ. ರಾಷ್ಟ್ರೋತ್ಥಾನ ಪರಿಷತ್ ಪರ ಹೈಕೋರ್ಟ್‌ ವಕೀಲ ಎಸ್.ರಾಜು ವಾದ ಮಂಡಿಸಿದರು.

ADVERTISEMENT

ಏನಿದು ಅರ್ಜಿ?: ಮೈಸೂರಿನ ಬೆಳವಾಡಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು 1ರಿಂದ 8ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ರಾಜ್ಯ ಪಠ್ಯಕ್ರಮದ ಅನುಸಾರ ಶಾಲೆ ನಡೆಸಲು ಸರ್ಕಾರದಿಂದ ಅನುಮತಿ ಹೊಂದಿದೆ. ಈ ಶಾಲೆಯಲ್ಲಿ ನರ್ಸರಿಯಿಂದ 8ನೇ ತರಗತಿವರೆಗೆ 591 ವಿದ್ಯಾರ್ಥಿಗಳಿದ್ದು, 2024-25ನೇ ಶೈಕ್ಷಣಿಕ ವರ್ಷದಲ್ಲಿ 306 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಶಾಲೆಯು ರಾಜ್ಯ ಪಠ್ಯಕ್ರಮದಿಂದ ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಲು ಎನ್‌ಒಸಿಗಾಗಿ ಆನ್‌ಲೈನ್‌ನಲ್ಲಿ ಮನವಿ ಸಲ್ಲಿಸಿತ್ತು. ಆದರೆ, ಶಿಕ್ಷಣ ಇಲಾಖೆ ನೀಡಿರಲಿಲ್ಲ.

‘ಎನ್‌ಒಸಿ ನೀಡಬೇಕಾದರೆ ಹಿಂದಿನ ಮೂರು ವರ್ಷಗಳ ಲೆಕ್ಕ ಪರಿಶೋಧನಾ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಬಲವಂತ ಮಾಡಲಾಗುತ್ತಿದೆ’ ಎಂದು ಆಕ್ಷೇಪಿಸಿದ್ದ ಅರ್ಜಿದಾರರು, ‘ಎನ್‌ಒಸಿ ಪಡೆದುಕೊಳ್ಳಲು ಹಿಂದಿನ ಮೂರು ವರ್ಷಗಳ ಲೆಕ್ಕ ಪರಿಶೋಧನಾ ವರದಿ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಘೋಷಿಸಬೇಕು. ರಾಷ್ಟ್ರೋತ್ಥಾನ ಪರಿಷತ್ 2024ರ ಮೇ 20ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.