ಬೆಂಗಳೂರು: ಗದುಗಿನ ತೋಂಟದ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯರಾದ ದಿನವನ್ನು ‘ಭಾವೈಕ್ಯತಾ ದಿನ’ವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿರುವುದಕ್ಕೆ ತಗಾದೆ ತೆಗೆದಿರುವ ದಿಂಗಾಲೇಶ್ವರ ಸ್ವಾಮೀಜಿಯವರನ್ನು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಹಂತದಲ್ಲಿ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು. ‘ಹುಬ್ಬಳ್ಳಿಯ ಮೂರು ಸಾವಿರ ಮಠದ ಪೀಠಾಧ್ಯಕ್ಷರಾಗುವುದನ್ನು ತಪ್ಪಿಸಿದ್ದೇ ತೋಂಟದ ಸಿದ್ದಲಿಂಗ ಸ್ವಾಮೀಜಿ ಎಂಬ ಗ್ರಹಿಕೆಯಿಂದ ಮತ್ತು ಅಸೂಯೆಯಿಂದ ಈಗಲೂ ದಿಂಗಾಲೇಶ್ವರ ಹಗೆತನ ಸಾಧಿಸುತ್ತಿದ್ದಾರೆ ಎಂದು ಹೇಳಿದರು.
ದಿಂಗಾಲೇಶ್ವರ ಸ್ವಾಮೀಜಿಯವರ ಪೂರ್ವಾಶ್ರಮ ಹೇಗಿತ್ತು ಎಂಬುದು ಇಡೀ ಗದಗದ ಜನರಿಗೆ ಗೊತ್ತು. ಇವರ ವಿರುದ್ಧ ಮೂರು ಮೊಕದ್ದಮೆಗಳು ದಾಖಲಾಗಿತ್ತು, ಎರಡರಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಗದ್ದುಗೆ ಹಿಡಿಯಬೇಕು ಎಂದು ಗೂಂಡಾ ಬಲ ಮತ್ತು ತೋಳ್ಬಲ ಬಳಸಿದ ಈ ವ್ಯಕ್ತಿಗೆ ಈಗ ತೋಂಟದ ಸಿದ್ದಲಿಂಗ ಸ್ವಾಮೀಜಿ ಬಗ್ಗೆ ಮಾತನಾಡುವ ನೈತಿಕ ಅಧಿಕಾರವಿಲ್ಲ ಎಂದು ಸಿ.ಸಿ.ಪಾಟೀಲ ತಿಳಿಸಿದರು.
ಒಂದು ಮಠದ ಸಮಾಧಿಯನ್ನು ಉದ್ಘಾಟನೆ ಮಾಡಲು ಹೋಗಿ ಇನ್ನೊಂದು ಮಠವನ್ನು ಸಮಾಧಿ ಮಾಡಿದ್ದಾರೆಂದು ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಹೇಳಿದ್ದಾರೆ. ಒಬ್ಬ ಮಠಾಧೀಶರಾಗಿ ಇನ್ನೊಂದು ಮಠದ ಬಗ್ಗೆ ಈ ರೀತಿ ವಿಷ ಕಾರುವುದು ಸರಿಯಲ್ಲ. ಮಠಾಧೀಶರು ಇರುತ್ತಾರೆ, ಹೋಗುತ್ತಾರೆ. ಆದರೆ, ಮಠದ ಘನತೆ, ಗಾಂಭೀರ್ಯ ಉಳಿಯಬೇಕು. ಆದರೆ ದಿಂಗಾಲೇಶ್ವರರು ಆ ಕೆಲಸ ಮಾಡುತ್ತಿಲ್ಲ. ಸಿದ್ದಲಿಂಗ ಸ್ವಾಮೀಜಿಯವರ ಬಗ್ಗೆ ದಿಂಗಾಲೇಶ್ವರರು ಬಳಸಿರುವ ಭಾಷೆ ಎಲ್ಲ ಭಕ್ತರಿಗೂ ನೋವುಂಟು ಮಾಡಿದೆ ಎಂದರು.
ಶಿರಹಟ್ಟಿ ಮಠಕ್ಕೂ ಒಳ್ಳೆಯ ಹೆಸರಿದೆ. ಹಿಂದಿನ ಸ್ವಾಮೀಜಿಗಳು ಅಪಾರ ಗೌರವ ಸಂಪಾದಿಸಿದ್ದರು. ಈಗಿನ ಸ್ವಾಮೀಜಿಗೆ ಬಸವಣ್ಣ ಅವರ ವಚನ ಹೇಳುವ ನೈತಿಕತೆ ಉಳಿಸಿಕೊಂಡಿಲ್ಲ. ದಿಂಗಾಲೇಶ್ವರರು ಬೇರೆ ಯಾವುದೇ ವಿಷಯಕ್ಕೆ ಟೀಕೆ ಮಾಡಿದ್ದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಗದಗಿನ ತೋಂಟದ ಸಿದ್ದಲಿಂಗ ಸ್ವಾಮೀಜಿಯವರ ಬಗ್ಗೆ ಮಾಡಿದ ಮಾತು ಎಲ್ಲರಿಗೂ ಬೇಸರ ಮೂಡಿಸಿದೆ ಎಂದು ಸಿ.ಸಿ.ಪಾಟೀಲ ತಿಳಿಸಿದರು.
ಶೇ 30 ರಷ್ಟು ಕಮಿಷನ್ ಬಗ್ಗೆ ಆರೋಪ ಮಾಡಿದ್ದಾರೆ. ಅದಕ್ಕೆ ಅವರು ಸಾಕ್ಷ್ಯ ಒದಗಿಸಲು ಸಾಧ್ಯವಾಗದಿದ್ದರೂ ಅಡ್ಡಿ ಇಲ್ಲ. ಇಂತವರಿಗೆ ಕಮಿಷನ್ ನೀಡಿದ್ದೇನೆ ಎಂದು ಹೆಸರು ಹೇಳಲಿ, ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ. ಲಂಚ ತೆಗೆದುಕೊಳ್ಳುವುದು ಅಪರಾಧವೋ ಕೊಡುವುದೂ ಅಪರಾಧವೇ ಆಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.