ಬೆಂಗಳೂರು: ‘ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದ ಆರೋಪಿ ವೈಭವ್‌ಕುಮಾರ್ ಜೈನ್, ಚಿನ್ನಾಭರಣ ವ್ಯಾಪಾರಿ ಹಾಗೂ ಚಿನ್ನದ ಲೇವಾದೇವಿಗಾರ. ಡ್ರಗ್ಸ್ ವ್ಯಸನಿಯಾಗಿದ್ದು, ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ. ಕ್ರಮೇಣ, ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದ’ ಎಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
‘ಪ್ರಕರಣದ 5ನೇ ಆರೋಪಿ ಆಗಿರುವ ವೈಭವ್‌ಕುಮಾರ್, ವೈಯಾಲಿಕಾವಲ್ ನಿವಾಸಿ. ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ಗ್ರಾಹಕರಿಗೆ ಮಾರುತ್ತಿದ್ದ. ಡ್ರಗ್ಸ್ ಮಾರಲೆಂದು ನಗರದ ವಿವಿಧೆಡೆ ಪಾರ್ಟಿ ಆಯೋಜಿಸುತ್ತಿದ್ದ. ಈ ಬಗ್ಗೆ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರು, ಆತನ ಪರಿಚಯಸ್ಥರು ಸಾಕ್ಷಿ ಹೇಳಿದ್ದಾರೆ’ ಎಂಬ ಅಂಶ ಪಟ್ಟಿಯಲ್ಲಿದೆ.
‘ಪೋಷಕರಿಂದ ಬಂದ ಲೇವಾದೇವಿ ವೃತ್ತಿಯಲ್ಲಿ ಆರೋಪಿಗೆ ಇಷ್ಟವಿರಲಿಲ್ಲ. ಡ್ರಗ್ಸ್ ಪ್ರಕರಣದ ಆರೋಪಿಗಳಾದ ವೀರೇನ್ ಖನ್ನಾ, ರಾಹುಲ್ ತೋನ್ಸೆ ಹಾಗೂ ಇತರೆ ಆರೋಪಿಗಳ ಜೊತೆ ಸಂಘಟಿತನಾಗಿ ಡ್ರಗ್ಸ್ ಮಾರುತ್ತಿದ್ದ. ನಗರದ ಹೊರವಲಯದ ರೆಸಾರ್ಟ್, ವಿಲ್ಲಾ ಹಾಗೂ ಕ್ಲಬ್‌ಗಳಲ್ಲಿ ಆತ ಪಾರ್ಟಿ ಆಯೋಜಿಸಿದ್ದಕ್ಕೆ ಪುರಾವೆಗಳಿವೆ’ ಎಂಬ ಸಂಗತಿಯನ್ನೂ ಪಟ್ಟಿಯಲ್ಲಿ ತಿಳಿಸಲಾಗಿದೆ.
ಪೊಟ್ಟಣದಲ್ಲಿ ಕೊಕೇನ್ ತುಂಬಿ ಮಾರಾಟ: ‘ಕೊಕೇನ್ ಖರೀದಿಸುತ್ತಿದ್ದ ಆರೋಪಿ, ಅದನ್ನು ಚಿಕ್ಕ ಪೊಟ್ಟಣಗಳಲ್ಲಿ ತುಂಬಿ ಇರಿಸುತ್ತಿದ್ದ. ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದವರಿಗೆ ಪೊಟ್ಟಣ ಕೊಡುತ್ತಿದ್ದ. ಅವರಿಂದ ಪ್ರತಿ ಗ್ರಾಂಗೆ ₹ 5,000ರಿಂದ ₹10,000 ಪಡೆಯುತ್ತಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ. ‘2018ರ ನವೆಂಬರ್ 7ರಂದು ವಿಮಾನ ನಿಲ್ದಾಣ ರಸ್ತೆಯಲ್ಲಿರುವ ‘ವೆರೋನಿಕಾ ವಿಲ್ಲಾ’ ಕ್ಲಬ್‌ನಲ್ಲಿ ತನ್ನ ಹುಟ್ಟುಹಬ್ಬ ಪಾರ್ಟಿ ಆಯೋಜಿಸಿದ್ದ. ಅಲ್ಲಿ ಪಾಲ್ಗೊಂಡಿದ್ದ 20 ಮಂದಿಗೆ ಡ್ರಗ್ಸ್ ಮಾರಿದ್ದ.’
‘2019ರ ಜನವರಿ 1ರಂದು ವೀರೇನ್ ಖನ್ನಾ ಜೊತೆ ‘ಜೇಡ್ ಗಾರ್ಡನ್’ನಲ್ಲಿರುವ ನಂಬರ್–365ರ ವಿಲ್ಲಾದಲ್ಲಿ ಪಾರ್ಟಿ ಆಯೋಜಿಸಿದ್ದ. ಗಣ್ಯರು ಹಾಗೂ ಶ್ರೀಮಂತರ ಮಕ್ಕಳು ಪಾರ್ಟಿಗೆ ಬಂದಿದ್ದರು. ಕೆಲವರು, ಸಿಗರೇಟಿನೊಳಗೆ ಗಾಂಜಾ ಹಾಕಿ ಸೇದಿದ್ದರು. ಹಲವರು, ಕೊಕೇನ್ ಪುಡಿಯನ್ನು ಮೊಬೈಲ್ ಸ್ಕ್ರೀನ್ ಮೇಲೆ ಹರಡಿ ಮೂಗಿನ ಮೂಲಕ ಎಳೆದು ನಶೆ ಏರಿಸಿಕೊಂಡಿದ್ದರು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.
‘2020ರಲ್ಲಿ ರಾಹಿ ಕ್ಲಬ್, ಯಲಹಂಕ ಬಳಿಯ ಲೆರೋಮಾ ಗಾರ್ಡೆನಿಯಾ ಹೋಮ್ ಸ್ಟೇ, ಜೇಡ್ ಗಾರ್ಡನ್‌ನ ನಂಬರ್–735 ವಿಲ್ಲಾದಲ್ಲಿ ಆರೋಪಿ ಪಾರ್ಟಿ ಮಾಡಿದ್ದಕ್ಕೆ ಪುರಾವೆಗಳು ಸಿಕ್ಕಿವೆ. ಉದ್ಯಮಿಗಳು, ಶ್ರೀಮಂತರ ಮಕ್ಕಳು ಹಾಗೂ ಯುವಕ–ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಕೊಕೇನ್, ಎಕ್ಸೈಟೆಸ್ಸಿ ಮಾತ್ರೆ ಹಾಗೂ ಗಾಂಜಾವನ್ನು ಪಾರ್ಟಿಯಲ್ಲಿ ಮಾರಲಾಗಿತ್ತು’ ಎಂಬ ಅಂಶವನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಸೆಳೆತ: 'ಸ್ನೇಹಿತರು ಹಾಗೂ ಪರಿಚಯಸ್ಥರಿಗೆ ಆರಂಭದಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪಿ ವೈಭವ್‌ಕುಮಾರ್, ಡ್ರಗ್ಸ್ ಮಾರಾಟ ಜಾಲ ವಿಸ್ತರಿಸಿಕೊಂಡಿದ್ದ. ಇತರೆ ಆರೋಪಿಗಳ ಜೊತೆ ಸೇರಿ, ಡ್ರಗ್ಸ್ ಮಾರಾಟ ಹೆಚ್ಚಿಸಿದ್ದ’ ಎಂದೂ ಪಟ್ಟಿಯಲ್ಲಿ ಹೇಳಲಾಗಿದೆ.
’ವಾಟ್ಸ್‌ಆ್ಯಪ್, ಫೇಸ್‌ಬುಕ್, ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದ ಆರೋಪಿ, ಅದರ ಮೂಲಕ ಯುವಕ–ಯುವತಿಯರನ್ನು ಸಂಪರ್ಕಿಸುತ್ತಿದ್ದ. ಡ್ರಗ್ಸ್ ಮಾರಾಟ ಬಗ್ಗೆ ಚಾಟಿಂಗ್ ಮಾಡಿರುವ ದಾಖಲೆಗಳು ಸಿಕ್ಕಿವೆ’ ಎಂಬುದನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
‘ಶ್ರೀ ಮನೆಯಲ್ಲಿ ಡ್ರಗ್ಸ್, ಗಾಂಜಾ ಗಿಡ’
‘ವೈಭವ್‌ಕುಮಾರ್ ಹಾಗೂ ಇತರೆ ಆರೋಪಿಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಹಾಸನದ ಶ್ರೀ ಅಲಿಯಾಸ್ ಶ್ರೀನಿವಾಸ್ ಸುಬ್ರಹ್ಮಣ್ಯ, ಜೇಡ್ ಗಾರ್ಡನ್‌ನಲ್ಲಿರುವ ತನ್ನ ವಿಲ್ಲಾವನ್ನು ಡ್ರಗ್ಸ್ ಪಾರ್ಟಿಗೆ ಕೊಟ್ಟಿದ್ದ. ಪ್ರಕರಣದಲ್ಲಿ ಆತ 18ನೇ ಆರೋಪಿ’ ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.
‘ಶ್ರೀ ಮನೆ ಹಾಗೂ ವಿಲ್ಲಾ ಮೇಲೆ ದಾಳಿ ಮಾಡಲಾಗಿತ್ತು. 100 ಗ್ರಾಂ ಗಾಂಜಾ, 6.45 ಗ್ರಾಂ ಎಕ್ಸೈಟೆಸ್ಸಿ ಮಾತ್ರೆಗಳು, 1 ಗ್ರಾಂ ಎಂಡಿಎಂಎ ಹಾಗೂ 2 ಚಿಕ್ಕ ಗಾಂಜಾ ಗಿಡಗಳು ಪತ್ತೆಯಾಗಿದ್ದವು.’ ‘ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕೆಲವರು, ವಿಲ್ಲಾ ಬಳಿ ಸ್ಥಳೀಯರ ಜೊತೆ ಗಲಾಟೆ ಸಹ ಮಾಡಿದ್ದರು.’ ಎಂಬ ಅಂಶವನ್ನೂ ಸಿಸಿಬಿ ಪೊಲೀಸರು ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.