ಬೆಂಗಳೂರು: ಅಂಧರು ಬಳಸುವ ಊರುಗೋಲಿಗೆ ಸೆನ್ಸರ್ ಸಾಧನಗಳನ್ನು ಅಳವಡಿಸುವ ಮೂಲಕ ಅವರು ಯಾವುದೇ ಅಡೆ–ತಡೆ ಇಲ್ಲದೆ ಸಂಚರಿಸಲು ನೆರವಾಗುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆ ಮೈಸೂರಿನ ಶಾಲೆಯೊಂದರ ವಿದ್ಯಾರ್ಥಿಗಳು.
ಈ ಊರುಗೋಲನ್ನು ಹಿಡಿದುಕೊಂಡು ಅಂಧ ವ್ಯಕ್ತಿ ರಸ್ತೆಯಲ್ಲಿ ಹೋಗುವಾಗಯಾರಾದರೂ ವ್ಯಕ್ತಿ ಎದುರಿಗೆ ಬಂದರೆ ಅಥವಾ ಯಾವುದೇ ಅಡೆತಡೆಗಳು ಎದುರಾದರೆ ಯಂತ್ರದಿಂದ ಎಚ್ಚರಿಕೆ ಗಂಟೆ ಕೇಳಿಬರುತ್ತದೆ. ಊರುಗೋಲಿನಿಂದ ಒಂದು ಮೀಟರ್ ಅಂತರದಲ್ಲಿ ಹೀಗೆ ಯಾವುದೇ ವಸ್ತು, ವ್ಯಕ್ತಿ ಕಾಣಿಸಿಕೊಂಡರೂ ಎಚ್ಚರಿಕೆ ನೀಡುವ ವ್ಯವಸ್ಥೆ ಇದರಲ್ಲಿದೆ.ಮೂರು ಹಂತಗಳಲ್ಲಿ ಈ ಎಚ್ಚರಿಕೆ ನೀಡುತ್ತದೆ. ವಸ್ತುವಿನ ಹತ್ತಿರ ಹೋದಾಗ ಜೋರಾಗಿ ಕೇಳಿಸುತ್ತದೆ.
ಇದಲ್ಲದೆ, ಕೊರಳಿಗೆ ಹಾಗೂ ತೋಳುಗಳಿಗೆ ಹಾಕಿಕೊಂಡು ಓಡಾಡುವ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಹಾಕಿಕೊಂಡು ಓಡಾಡುವಾಗ, ಯಾವುದಾದರೂ ವಸ್ತು ಅಥವಾ ವ್ಯಕ್ತಿ ಹತ್ತಿರದಲ್ಲಿದ್ದರೆ, ಕಂಪನದ ಮೂಲಕ ಸೂಚನೆ ನೀಡುತ್ತದೆ. ಈಗಾಗಲೇ ಇರುವ ಉಪಕರಣಗಳು ದುಬಾರಿಯಾಗಿದ್ದು, ಇದು ಅತ್ಯಂತ ಅಗ್ಗ ಅಂದರೆ ₹1,500ಗಳಲ್ಲಿ ಇದನ್ನು ಪಡೆಯಬಹುದು ಎಂದು ವಿದ್ಯಾರ್ಥಿ ಇಶಾಂತ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.