ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಕೇಂದ್ರದ ನಗದು ರಹಿತ ಸೇವೆ ಸ್ಥಗಿತ?

ಫೆ.15ರಿಂದ ಜಾರಿ ಸಾಧ್ಯತೆ * ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳಡಿ ₹ 1,200 ಕೋಟಿ ಬಾಕಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 21:47 IST
Last Updated 3 ಜನವರಿ 2020, 21:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ಆರೋಗ್ಯ ಯೋಜನೆಗಳಡಿ ಕೇಂದ್ರ ಸರ್ಕಾರವು ನಿಗದಿತ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ನಗದು ರಹಿತ ವೈದ್ಯಕೀಯ ಸೇವೆಗಳನ್ನುಫೆ.15ರಿಂದ ಸ್ಥಗಿತಗೊಳಿಸಲು ಮುಂದಾಗಿವೆ.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ಹಾಗೂ ಮಾಜಿ ಸೈನಿಕರ ನೆರವಿನ ಆರೋಗ್ಯ ಯೋಜನೆಯಡಿ (ಇಸಿಎಚ್‌ಎಸ್‌) ಕೇಂದ್ರ ಸರ್ಕಾರವು ದೇಶದ ವಿವಿಧ ಖಾಸಗಿ ಆಸ್ಪತ್ರೆಗಳಿಂದ ಬಹುಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

ರಾಜ್ಯದಲ್ಲಿಯೂ ಈ ಯೋಜನೆಗಳಡಿ ಹಲವು ಆಸ್ಪತ್ರೆಗಳು ಸೇವೆಗಳನ್ನು ನೀಡುತ್ತಿದ್ದು, ಬಾಕಿ ಹಣಗಳಿಗೆ ಎದುರು ನೋಡುತ್ತಿವೆ. ಯೋಜನೆಗಳಡಿ ಚಿಕಿತ್ಸಾ ವೆಚ್ಚವನ್ನು ಪರಿಷ್ಕರಿಸದಿರುವುದು ಕೂಡ ಖಾಸಗಿ ಆಸ್ಪತ್ರೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಬಾಕಿ ಹಣದ ಪಾವತಿ ವಿಚಾರವಾಗಿ ಈಗಾಗಲೇ ಕೇಂದ್ರ ಸರ್ಕಾರದ ಅಧಿಕಾರಿಗಳುಖಾಸಗಿ ಆಸ್ಪತ್ರೆಗಳ ಒಕ್ಕೂಟದ ಜತೆಗೆ ಸಭೆ ನಡೆಸಿ, ಮಾತುಕತೆ ನಡೆಸಿದರೂ ಫಲಪ್ರದವಾಗಲಿಲ್ಲ.ರಾಜ್ಯದಲ್ಲಿ ಸುಮಾರು 20 ಖಾಸಗಿ ಆಸ್ಪತ್ರೆಗಳು ಸಿಜಿಎಚ್‍ಎಸ್ ಯೋಜನೆಯಡಿ ಚಿಕಿತ್ಸೆ ನೀಡುತ್ತಿದ್ದು, ಅವುಗಳಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು 2 ಸಾವಿರಕ್ಕೂ ಅಧಿಕ ಪ್ರಕರಣಗಳಿಗೆ ಬಾಕಿ ಹಣದ ಮರುಪಾವತಿಗಾಗಿ ಎದುರುನೋಡುತ್ತಿವೆ.

‘ಜ.30ಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಸಭೆ ನಡೆಸಿ, ಈ ವಿಚಾರವಾಗಿ ಚರ್ಚಿಸುತ್ತೇವೆ. ಅಷ್ಟರೊಳಗೆ ನಮ್ಮ ಬೇಡಿಕೆ ಈಡೇರಿಸಿದಲ್ಲಿ ಮಾತ್ರ ನಗದು ರಹಿತ ಸೇವೆಯನ್ನು ಮುಂದುವರಿಸುತ್ತೇವೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‍ಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ.ಆರ್.ರವೀಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ದೆಹಲಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ಬಿಡುಗಡೆಯಾಗಿದೆ. ಸಿಜಿಎಚ್‍ಎಸ್ ಯೋಜನೆಯಡಿ 2014ರಲ್ಲಿ ಕೇಂದ್ರ ಸರ್ಕಾರವು ದರ ಪಟ್ಟಿ ಪರಿಷ್ಕರಣೆಗಾಗಿ ಟೆಂಡರ್ ಕರೆದಿತ್ತು. ಆ ಸಂದರ್ಭದಲ್ಲಿ ದೆಹಲಿ ದರಕ್ಕಿಂತ ಶೇ 10 ರಷ್ಟು ಕಡಿಮೆ ಮಾಡಿ, ರಾಜ್ಯದ ಆಸ್ಪತ್ರೆಗಳ ಚಿಕಿತ್ಸೆಯ ದರ ನಿಗದಿ ಪಡಿಸಿತ್ತು. ಕಳೆದ ಒಂದು ವರ್ಷದಿಂದಲೂ ದರ ಹೆಚ್ಚಿಸುವುದಾಗಿ ಭರವಸೆ ನೀಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಂಕಿ–ಅಂಶಗಳು

₹ 1,200 ಕೋಟಿ:ದೇಶದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಪಾವತಿಯಾಗಬೇಕಾದ ಹಣ

₹ 200 ಕೋಟಿ:ರಾಜ್ಯದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಪಾವತಿಯಾಗಬೇಕಾದ ಮೊತ್ತ

71:ಸಿಜಿಎಚ್‌ಎಸ್‌,ಇಸಿಎಚ್‌ಎಸ್‌ ಯೋಜನೆ ಜಾರಿಯಲ್ಲಿರುವ ನಗರಗಳು

35 ಲಕ್ಷ:ಯೋಜನೆಗಳಡಿ ದೇಶದಲ್ಲಿನ ಒಟ್ಟು ಫಲಾನುಭವಿಗಳ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.