ADVERTISEMENT

ಕೇಂದ್ರ ಸಂಪುಟ ಪುನರ್‌ರಚನೆ ಸುದ್ದಿಗೆ ಪುಷ್ಟಿ: ಸಂಪುಟಕ್ಕೆ ಸರ್ಜರಿ ಇಂದು ಸಂಜೆ

ರಾಜಧಾನಿ ತಲುಪಿದ ಹಲವು ಮುಖಂಡರು

ಪಿಟಿಐ
Published 6 ಜುಲೈ 2021, 21:39 IST
Last Updated 6 ಜುಲೈ 2021, 21:39 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಪುನರ್‌ರಚನೆಯು ಬುಧವಾರ ಸಂಜೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅದಕ್ಕೆ ಪೂರಕವಾದ ಚಟುವಟಿಕೆಗಳಿಗೆ ರಾಜಧಾನಿಯು ಮಂಗಳವಾರ ಸಾಕ್ಷಿಯಾಗಿದೆ.

ಸಚಿವ ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗುತ್ತಿರುವ ಬಿಜೆಪಿ ಮುಖಂಡರಾದ ಸರ್ವಾನಂದ ಸೋನೊವಾಲ್‌, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನಾರಾಯಣ ರಾಣೆ ಅವರು ಮಂಗಳವಾರ ದೆಹಲಿ ತಲುಪಿದ್ದಾರೆ. ಬಿಜೆಪಿಯ ಮಿತ್ರ ಪಕ್ಷಗಳ ಪ್ರತಿನಿಧಿಗಳಾಗಿ ಸಂಪುಟ ಸೇರಲಿದ್ದಾರೆ ಎಂದು ಬಿಂಬಿತವಾಗಿರುವ ಜೆಡಿಯುನ ಆರ್.ಸಿ.ಪಿ.ಸಿಂಗ್‌ ಮತ್ತು ಎಲ್‌ಜೆಪಿಯ ಪಶುಪತಿ ಕುಮಾರ್‌ ಪಾರಸ್‌ ಅವರೂ ದೆಹಲಿಗೆ ಬಂದಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಚಿವ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದು, ಸಚಿವ ಸಂಪುಟ ಪುನರ್‌ರಚನೆ ಆಗಲಿದೆ ಎಂಬ ವಾದಕ್ಕೆ ಪುಷ್ಟಿ ಕೊಟ್ಟಿದೆ.

ADVERTISEMENT

ಆದರೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಂಭಾವ್ಯ ಸಚಿವರು ಎಂದು ಬಿಂಬಿತವಾದ ಯಾರೂ ಬಾಯಿಬಿಟ್ಟಿಲ್ಲ. ಸರ್ಕಾರ ಸೇರುವಂತೆ ತಮಗೆ ಯಾವುದೇ ಕರೆ ಬಂದಿಲ್ಲ ಎಂದು ರಾಣೆ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಂದ ಸೋಮವಾರವೇ ಕರೆ ಬಂದಿದೆ.

ಆದರೆ, ಅದು ಎಲ್‌ಜೆಪಿ ಸಂಸ್ಥಾಪಕ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಜನ್ಮದಿನಕ್ಕೆ ಸಂಬಂಧಿಸಿಯೇ ಹೊರತು ಸಂಪುಟ ಸೇರ್ಪಡೆ ಬಗ್ಗೆ ಅಲ್ಲ ಎಂದು ಪಾರಸ್‌ ಸ್ಪಷ್ಟಪಡಿಸಿದ್ದಾರೆ.

ಸಂಪುಟ ಪುನರ್‌ರಚನೆ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಪ್ರಕಟವಾಗಿಲ್ಲ. ಆದರೆ, ಉನ್ನತ ಮಟ್ಟದಲ್ಲಿ ಸರಣಿ ಸಭೆಗಳು ನಡೆದಿವೆ. 2019ರಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಪುಟದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿವೆ. ಇದು ಯಾವಾಗ ಬೇಕಿದ್ದರೂ ಆಗಬಹುದು ಎಂದು ಮೂಲಗಳೂ ತಿಳಿಸಿವೆ.

ಚಿರಾಗ್‌ ಆಕ್ಷೇಪ: ತಮ್ಮ ಚಿಕ್ಕ‍ಪ್ಪ ಪಶುಪತಿ ಕುಮಾರ್‌ ಪಾರಸ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಎಲ್‌ಜೆಪಿ ಮುಖಂಡ ಚಿರಾಗ್‌ ಪಾಸ್ವಾನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್‌ಜೆಪಿ ಎರಡು ಬಣಗಳಾಗಿ ಇತ್ತೀಚೆಗಷ್ಟೇ ಒಡೆದಿದೆ. ಪಾರಸ್‌ ಜತೆಗೆ ನಾಲ್ವರು ಸಂಸದರಿದ್ಧಾರೆ. ಚಿರಾಗ್‌ ಏಕಾಂಗಿಯಾಗಿದ್ದಾರೆ. ಎಲ್‌ಜೆಪಿಯಿಂದ ಹೊರ ಹೋಗಿರುವ ಬಣದಿಂದ ಯಾರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಪ್ರಧಾನಿಯವರನ್ನು ಚಿರಾಗ್‌ ಕೋರಿದ್ದಾರೆ. ಸಂಪುಟಕ್ಕೆ ಸೇರಿಸಿಕೊಂಡರೆ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಲಾಗುವುದು ಎಂದಿದ್ದಾರೆ.

ಚಟುವಟಿಕೆ ಬಿರುಸು: ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಅವರು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮಂಗಳವಾರ ಸಂಜೆ ಭೇಟಿಯಾಗಿದ್ದಾರೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರೂ ಸಂತೋಷ್‌ ಅವರನ್ನು ಭೇಟಿಯಾಗಿದ್ದಾರೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಜಂಟಿ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಗೋಪಾಲ್‌ ಮತ್ತು ಮನಮೋಹನ ವೈದ್ಯ ಅವರೂ ಕೆಲವು ದಿನಗಳಿಂದ ರಾಜಧಾನಿಯಲ್ಲಿಯೇ ಇದ್ದಾರೆ.

ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿರುವ ಗೆಹ್ಲೋಟ್‌ ಅವರು ರಾಜ್ಯಸಭೆಯ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ಹಾಗಾಗಿ, ಸಚಿವ ಸಂಪುಟ ಮತ್ತು ರಾಜ್ಯಸಭೆಯಲ್ಲಿ ಒಂದು ಸ್ಥಾನ ತೆರವಾಗಲಿದೆ. ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ಗೆಹ್ಲೋಟ್‌ ಅವರು ದಲಿತ ಸಮುದಾಯವನ್ನು ಪ್ರತಿನಿಧಿಸುವ ಏಕೈಕ ಸದಸ್ಯರಾಗಿದ್ದರು. ಸಂಸದೀಯ ಮಂಡಳಿಯಲ್ಲಿಯೂ ಒಂದು ಸ್ಥಾನ ತೆರವಾಗಲಿದೆ. ‌

ಸಾಧ್ಯತೆಗಳು:

* ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್‌ಗೆ ಹೆಚ್ಚು ಪ್ರಾತಿನಿಧ್ಯ

*ಇತ್ತೀಚೆಗಷ್ಟೇ ವಿಧಾನಸಭೆ ಚುನಾವಣೆ ನಡೆದ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳ ಬಿಜೆಪಿ ಸಂಸದರಿಗೆ ಹೆಚ್ಚು ಅವಕಾಶ

* ಹೊಸ ತಲೆಮಾರಿನ ಮುಖಂಡರನ್ನು ಮುನ್ನೆಲೆಗೆ ತರಲು ಹೊಸ ಮುಖಗಳು ಮತ್ತು ಯುವ ಜನರಿಗೆ ಮನ್ನಣೆ

* ಜಾತಿ ಮತ್ತು ಪ‍್ರಾದೇಶಿಕ ಸಮತೋಲನಕ್ಕೆ ಒತ್ತು

* ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೆಲವು ಮುಖಂಡರಿಗೆ ಸಚಿವ ಸ್ಥಾನ

*ಗೆಹ್ಲೋಟ್‌ ಅವರಲ್ಲದೆ, ಇತರ ಕೆಲವು ಸಚಿವರ ತಲೆದಂಡ

*ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವವರು ಹೆಚ್ಚುವರಿ ಖಾತೆ ಕಳೆದುಕೊಳ್ಳಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.