ADVERTISEMENT

ಪ್ರಜ್ವಲ್‌ಗೆ ಕೇಂದ್ರ ಸರ್ಕಾರ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಿದೆ: ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 2 ಮೇ 2024, 9:32 IST
Last Updated 2 ಮೇ 2024, 9:32 IST
ಗೃಹಸಚಿವ ಜಿ. ಪರಮೇಶ್ವರ್
ಗೃಹಸಚಿವ ಜಿ. ಪರಮೇಶ್ವರ್   

ಕಲಬುರಗಿ: ‘ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೇಂದ್ರ ಸರ್ಕಾರ ರಾಜತಾಂತ್ರಿಕ (ಡಿಪ್ಲೊಮ್ಯಾಟಿಕ್‌ ) ಪಾಸ್‌ಪೋರ್ಟ್‌ ಕೊಟ್ಟಿದ್ದರಿಂದಾಗಿ ರಾತ್ರೋರಾತ್ರಿ ದೇಶ ಬಿಟ್ಟು ಹೋಗಿದ್ದಾರೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜ್ವಲ್ ಅವರು ಹೊರ ದೇಶಕ್ಕೆ ಹೋದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ದೂರು ಕೊಡುವುದು ಗಮನಕ್ಕೆ ಬರುತ್ತಿದ್ದಂತೆ ದೇಶ ಬಿಟ್ಟು ಹೋಗಿದ್ದಾರೆ. ವಿದೇಶಕ್ಕೆ ಹೋಗಿರುವ ಟಿಕೆಟ್‌ಗಳು ನಮಗೆ ಲಭ್ಯವಾಗಿವೆ. ಕೇಂದ್ರ ಸರ್ಕಾರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಕೊಟ್ಟಿದ್ದರಿಂದಾಗಿ ಅವರು ರಾತ್ರೋರಾತ್ರಿ ದೇಶ ಬಿಟ್ಟು ಹೋಗಿದ್ದಾರೆ’ ಎಂದರು.

‘ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದವರಿಗೆ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಶ್ನೆಗಳನ್ನು ಕೇಳುವುದಿಲ್ಲ. ಪಾಸ್‌ಪೋರ್ಟ್ ನೋಡಿದ ತಕ್ಷಣ ಅವರನ್ನು ಹೋಗಿ ಎಂದು ಒಳ ಬಿಡುತ್ತಾರೆ. ಜೆನ್ಯುನ್​ ವೀಸಾ ಹೊಂದಿದ್ದರಿಂದ 32ರಿಂದ 40 ದೇಶಗಳಲ್ಲಿ ಸುಲಭವಾಗಿ ಹೋಗಬಹುದು. ಹೀಗಾಗಿ, ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೊರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಪ್ರಜ್ವಲ್ ಅವರಿಗೆ ಸೆಕ್ಷನ್‌ 41 ‘ಎ’ ಅಡಿ ಲುಕ್‌ಔಟ್ ನೋಟಿಸ್ ಹೊರಡಿಸಿದ್ದು, 24 ಗಂಟೆಗಳ ಒಳಗಾಗಿ ಆರೋಪಿಗಳು ವಿಚಾರಣಾ ಅಧಿಕಾರಿಗಳ ಮುಂದೆ ಹಾಜರಾಗಬೇಕು. ನೋಟಿಸ್ ಹೊರಡಿಸಿದ್ದ ಗಡುವು ಮುಗಿಯುವ ಹಂತಕ್ಕೆ ಬಂದಿದೆ. ಪ್ರಜ್ವಲ್ ಅವರು ದೇಶದ ಹೊರಗಡೆ ಹೋಗಿದ್ದರಿಂದ ಇನ್ನೂ ಬಂದಿಲ್ಲ. ಪ್ರಕರಣ ಮತ್ತೊಬ್ಬ ಆರೋಪಿ ಶಾಸಕ ಎಚ್‌.ಡಿ. ರೇವಣ್ಣ ಅವರು ಬರಬೇಕಾಗಿತ್ತು. ಇವತ್ತು (ಮೇ 2ರಂದು) ವಿಚಾರಣೆಗೆ ಬರುವುದಾಗಿ ಹೇಳಿದ್ದಾರೆ. ಒಂದು ವೇಳೆ ಬರದೆ ಇದ್ದರೆ, ಕಾನೂನು ಪ್ರಕಾರ ಅವರನ್ನು ಬಂಧಿಸಬೇಕಾಗುತ್ತದೆ’ ಎಂದರು.

‘ಪ್ರಜ್ವಲ್ ಪರ ವಕೀಲರು ಆರು ದಿನ ಕಾಲಾವಕಾಶ ಕೊಡುವಂತೆ ಕೋರಿದ್ದಾರೆ. ನಿಬಂಧನೆಗಳ ಪ್ರಕಾರ ಹೆಚ್ಚಿನ ಸಮಯ ಕೊಡಲು ಸಾಧ್ಯವಿಲ್ಲ. ಈ ಬಗ್ಗೆ ಈಗಾಗಲೇ ಕಾನೂನು ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ. ಆರೋಪಿಯು ಬೇರೆ ಯಾವುದೇ ರೀತಿಯಲ್ಲಿ ತಪ್ಪಿಸಿಕೊಳ್ಳಲು ಅಥವಾ ಸಮಯ ಹೊಂದಿಸಿಕೊಳ್ಳಲು ಅವಕಾಶ ಇಲ್ಲ’ ಎಂದು ಎಚ್ಚರಿಸಿದರು.

‘ಲೈಂಗಿಕ ದೌರ್ಜನ್ಯ ಆರೋಪದಡಿ ಮತ್ತೊಬ್ಬ ಮಹಿಳೆ ನಿನ್ನೆ (ಮೇ 1ರಂದು) ದೂರು ಕೊಟ್ಟಿದ್ದಾರೆ. ಸಂತ್ರಸ್ತೆಯರು ಸ್ವಯಂಪ್ರೇರಿತವಾಗಿ ಮುಂದೆ ಬಂದು ದೂರು ಕೊಡಬಹುದು. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಲು ಸರ್ಕಾರ ಸನ್ನದ್ಧವಾಗಿದೆ. ತನಿಖೆಯಲ್ಲಿ ಎಸ್‌ಐಟಿ ಮತ್ತು ಸರ್ಕಾರ ಯಾವುದೇ ರೀತಿಯ ಒತ್ತಡವನ್ನು ಮಹಿಳೆಯರ ಮೇಲೆ ಹಾಕುವುದಿಲ್ಲ. ಇದೊಂದು ಸೂಕ್ಷ್ಮ ಮತ್ತು ಗಂಭೀರ ಪ್ರಕರಣವಾಗಿದ್ದು, ಎಚ್ಚರಿಕೆಯಿಂದ ನಿಭಾಯಿಸಲಾಗುವುದು’ ಎಂದು ಸ್ಪಷ್ಟನೆ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಹಿಳೆಯರ ಅಶ್ಲೀಲ ವಿಡಿಯೊಗಳಿಗೆ ಪ್ರತಿಕ್ರಿಯಿಸಿದ ಸಚಿವರು, ‘ಇಂತಹ ವಿಡಿಯೊಗಳು ಬಂದಾಗ ಈ ಹಿಂದೆಯೇ ಸಂಬಂಧಿಸಿದ ಏಜೆನ್ಸಿಗಳಿಗೆ ಮೇಲ್ ಮಾಡಿದ್ದೇವು. ಇದರಲ್ಲಿ ರಾಷ್ಟ್ರೀಯ ಪರಿಣಾಮ ಇಲ್ಲ ಎಂದು ಪ್ರತಿಕ್ರಿಯೆ ಕೊಟ್ಟು ಸುಮ್ಮನಾದರು. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರ ಭವಿಷ್ಯವಿದೆ. ಹೀಗಾಗಿ, ಜನರು ಸಹಕಾರ ಕೊಡಬೇಕು’ ಎಂದು ಪರಮೇಶ್ವರ್ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.