ನವದೆಹಲಿ: ಬರದಿಂದ ಬಸವಳಿದ ಬಯಲುಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲ ಹಂತ ಸಾಕಾರಗೊಂಡ ಬೆನ್ನಲ್ಲೇ, ಈ ಯೋಜನೆಗೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತಕರಾರು ಎತ್ತಿದೆ. ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿಗಳಿದ್ದು, ಈ ಬಗ್ಗೆ ವಾಸ್ತವಾಂಶದ ಹಾಗೂ ಇಡೀ ಯೋಜನೆ ಕಾರ್ಯಸಾಧ್ಯತೆಯ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.
ಎತ್ತಿನಹೊಳೆಯ ಮುಖ್ಯ ಕಾಲುವೆ ನಿರ್ಮಾಣಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಂಚಿಗಾನಹಳ್ಳಿಯ ಸರ್ವೆ ಸಂಖ್ಯೆ 2, 30 ಹಾಗೂ ಯಲ್ಲಾಪುರ ಗ್ರಾಮದ ಸರ್ವೆ ಸಂಖ್ಯೆ 34, 35 ಮತ್ತು 36ರ (ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ) 26 ಎಕರೆ ಅರಣ್ಯ ಬಳಕೆಗೆ ವಿಶ್ವೇಶ್ವರ ಜಲ ನಿಗಮವು 2020ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು 2024ರ ಜುಲೈ ತಿಂಗಳಲ್ಲಿ ಪತ್ರ ಬರೆದಿತ್ತು. ಈ ಪ್ರಸ್ತಾವದ ಕುರಿತು ಸ್ಪಷ್ಟನೆ ಹಾಗೂ ಹೆಚ್ಚುವರಿ ಮಾಹಿತಿ ಒದಗಿಸುವಂತೆ ರಾಜ್ಯ ಅರಣ್ಯ ಇಲಾಖೆಗೆ ಸಚಿವಾಲಯ ನಿರ್ದೇಶನ ನೀಡಿದೆ.
‘ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ದೇವನಹಳ್ಳಿ ಕೈಗಾರಿಕಾ ಪ್ರದೇಶದ ಕುಡಿಯುವ ನೀರು ಒದಗಿಸುವ ಉದ್ದೇಶದ ಈ ಯೋಜನೆಗೆ ಈವರೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಜೀವವೈವಿಧ್ಯದ ಮೇಲೆ ಹಾನಿಯಾಗಿದೆ ಹಾಗೂ ಭೂಕುಸಿತದಂತ ದುರಂತಗಳು ಘಟಿಸಿವೆ. ಆದರೆ, ಕುಡಿಯುವ ನೀರು ಒದಗಿಸುವ ಉದ್ದೇಶವೇ ಈಡೇರಿಲ್ಲ ಹಾಗೂ ಬರಪೀಡಿತ ಪ್ರದೇಶಕ್ಕೆ ಹನಿ ನೀರು ಹರಿದಿಲ್ಲ’ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಸಚಿವಾಲಯ, ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದೆ.
ಈ ಸಂಬಂಧ ಸಚಿವಾಲಯದ ಡಿಐಜಿ ಪ್ರಣಿತಾ ಪಾಲ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರಿಗೆ ಪತ್ರ ಬರೆದು ವಿವರಣೆಗಳನ್ನು ಕೇಳಿದ್ದಾರೆ.
ಸಚಿವಾಲಯದ ತಕರಾರುಗಳೇನು?
ಈ ಯೋಜನೆಯ ಕಾರ್ಯಗತಗೊಳಿಸಲು 1,200 ಹೆಕ್ಟೇರ್ (3 ಸಾವಿರ ಎಕರೆ) ಬಳಸಿಕೊಳ್ಳಲಾಗುತ್ತಿದ್ದು, ಅದರಲ್ಲಿ ಶೇ 50ರಷ್ಟು ಅರಣ್ಯ ಪ್ರದೇಶ ಎಂದು ವಿಸ್ತೃತ ಯೋಜನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ 26 ಎಕರೆ ಅರಣ್ಯ ಬಳಕೆಗೆ ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. ಈ ರೀತಿ ಪ್ರತ್ಯೇಕ ಪ್ರತ್ಯೇಕ ಪ್ರಸ್ತಾವಗಳನ್ನು (ಪೀಸ್ ಮೀಲ್ ಮಾದರಿ) ಸಲ್ಲಿಸುವುದು ಸರಿಯಲ್ಲ. ಯೋಜನೆಗೆ ಬೇಕಿರುವ ಅರಣ್ಯ ಪ್ರದೇಶಗಳ ಸಮಗ್ರ ಪ್ರಸ್ತಾವ ಸಲ್ಲಿಸಬೇಕು.
ಎತ್ತಿನಹೊಳೆಗಾಗಿ ಸಕಲೇಶಪುರ ತಾಲ್ಲೂಕಿನ 30 ಎಕರೆ ಅರಣ್ಯ ಪ್ರದೇಶ ಬಳಸಲು 2016ರಲ್ಲಿ ಕರ್ನಾಟಕ ನೀರಾವರಿ ನಿಗಮ ಪ್ರಸ್ತಾವ ಸಲ್ಲಿಸಿತ್ತು. ಎರಡನೇ ಹಂತದ ಅನುಮೋದನೆ ಸಂದರ್ಭದಲ್ಲಿ ಪ್ರಸ್ತಾವದ ಮಾರ್ಪಾಡಿಗೆ ರಾಜ್ಯ ಸರ್ಕಾರ 2019ರಲ್ಲಿ ಪತ್ರ ಬರೆದಿತ್ತು. ಪ್ರಸ್ತಾವಕ್ಕೆ ಅನುಮೋದನೆ ನೀಡುವ ಮುನ್ನ ಸಚಿವಾಲಯವು ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ವಿಶ್ಲೇಷಣೆ ನಡೆಸಿತ್ತು. ಅನುಮೋದನೆ ನೀಡಿರುವ ಪ್ರದೇಶದ ಆಚೆಗಿನ ಅರಣ್ಯವನ್ನು ಜಲಸಂಪನ್ಮೂಲ ಇಲಾಖೆ ಬಳಸಿರುವುದು ಈ ವೇಳೆ ಗೊತ್ತಾಗಿತ್ತು. ಅರಣ್ಯ ಪ್ರದೇಶದ ಮರು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿತ್ತು. ಐದು ವರ್ಷ ಕಳೆದರೂ ರಾಜ್ಯ ಸರ್ಕಾರ ವರದಿ ಸಲ್ಲಿಸಿಲ್ಲ. ಈ ವರದಿಯನ್ನು ಸಚಿವಾಲಯಕ್ಕೆ ಕೊಡಬೇಕು.
ಪರಿಹಾರಾತ್ಮಕ ಅರಣ್ಯೀಕರಣದ ಯೋಜನೆಯನ್ನು ಸಚಿವಾಲಯಕ್ಕೆ ಸಲ್ಲಿಸಬೇಕು.
ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವದ ವಿವರಗಳನ್ನು ಪರಿಶೀಲನೆ ನಡೆಸಿದಾಗ, ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಗುರುತಿಸಿರುವ ಜಾಗದಲ್ಲಿ ರಸ್ತೆ ಹಾದು ಹೋಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ ವಿವರಣೆ ನೀಡಬೇಕು ಹಾಗೂ ಪ್ರಮಾಣಪತ್ರ ಸಲ್ಲಿಸಬೇಕು.
ಪರಿಹಾರಾತ್ಮಕ ಅರಣ್ಯಕ್ಕೆ ಗುರುತಿಸಿರುವ ಅರಣ್ಯೇತರ ಜಾಗವು ತೀರ್ಥರಾಮಪುರ ರಾಜ್ಯ ಅರಣ್ಯದ ವ್ಯಾಪ್ತಿಯಲ್ಲಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು.
ವನ್ಯಜೀವಿಗಳ ಮೇಲೆ ಹಾನಿ ತಗ್ಗಿಸುವಿಕೆ ಯೋಜನೆ ಬಗ್ಗೆ ಹಾಸನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಹಾಗೂ ತುಮಕೂರು ಡಿಸಿಎಫ್ ಶಿಫಾರಸು ಮಾಡಿದ್ದರು. ಈ ಬಗ್ಗೆ ಪಿಸಿಸಿಎಫ್ ಅವರು 2023ರ ಡಿಸೆಂಬರ್ 16ರಂದು ಬರೆದ ಪತ್ರದಲ್ಲಿ ಉಲ್ಲೇಖವಿದೆ. ಸ್ಥಳ ಪರಿಶೀಲನಾ ವರದಿಯಲ್ಲಿ ಈ ಬಗ್ಗೆ ಚಕಾರ ಎತ್ತಿಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಪ್ರತಿಕ್ರಿಯೆ ಕೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.