ADVERTISEMENT

ತೆರಿಗೆ ‘ಧರ್ಮ’ಕ್ಕೆ ಕಟ್ಟಿದ್ದೀರಾ?: ಶಿಯೊಮಿ ಕಂಪನಿಗೆ ಕೇಂದ್ರದ ಕೂರಂಬು

​ಪ್ರಜಾವಾಣಿ ವಾರ್ತೆ
Published 12 ಮೇ 2022, 20:47 IST
Last Updated 12 ಮೇ 2022, 20:47 IST
   

ಬೆಂಗಳೂರು: ‘ಭಾರತದ ನೆಲದಲ್ಲಿ ಬಂಡವಾಳ ಹೂಡಿ ಸಹಸ್ರಾರು ಕೋಟಿ ಲಾಭ ಗಳಿಸಿದ್ದೀರಿ. ಅದಕ್ಕೇ ಲಕ್ಷಗಟ್ಟಲೆ ತೆರಿಗೆ ಕಟ್ಟಿದ್ದೀರಿ, ಅದು ಬಿಟ್ಟು ನೀವೇನಾದರೂ ‘ಧರ್ಮ’ಕ್ಕೆ ತೆರಿಗೆ ಕಟ್ಟಿದ್ದೀರಾ’ ಎಂದು ಚೀನಾದ ಶಿಯೊಮಿ ಕಂಪನಿಯನ್ನು ಖಾರವಾಗಿ ಪ್ರಶ್ನಿಸಿದ ಕೇಂದ್ರ ಸರ್ಕಾರ, ಕಂಪನಿಯ ಬೃಹತ್‌ ಮೊತ್ತವನ್ನು ಜಪ್ತಿ ಮಾಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಕ್ರಮವನ್ನು ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.

ಬೆಂಗಳೂರಿನಲ್ಲಿರುವ ತನ್ನ ನಾಲ್ಕು ಬ್ಯಾಂಕ್‌ ಖಾತೆಗಳಲ್ಲಿನ ₹ 5,551.27 ಕೋಟಿ ಮೊತ್ತವನ್ನು ಜಪ್ತಿ ಮಾಡಿರುವ ಇ.ಡಿ ಕ್ರಮವನ್ನು ಪ್ರಶ್ನಿಸಿಶಿಯೊಮಿ ಇಂಡಿಯಾ ಕಂಪನಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆಕಂಪನಿ ಪರ ಹಿರಿಯ ವಕೀಲ ಗಣೇಶನ್‌, ‘ಕಂಪನಿಯು, ಕಳೆದ ಎಂಟು ವರ್ಷಗಳಲ್ಲಿ ಅಂದಾಜು ಒಂದು ಲಕ್ಷ ಕೋಟಿ ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡಿದೆ. ಕಾನೂನು ಚೌಕಟ್ಟಿನಲ್ಲೇ ತನ್ನ ವಹಿವಾಟು ಮುಂದುವರಿಸಿದೆ. ಆದರೆ, ಈಗ ಇ.ಡಿ, ಅಕ್ರಮ ವರ್ಗಾವಣೆ ನೆಪದಲ್ಲಿ ಬಹುಕೋಟಿ ಹಣವನ್ನು ಜಪ್ತಿ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ’ ಎಂದು ಆಕ್ಷೇಪಿಸಿದರು.

ADVERTISEMENT

ಇದನ್ನು ಬಲವಾಗಿ ಅಲ್ಲಗಳೆದ ಇ.ಡಿ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ.ನರಗುಂದ, ‘ಭಾರತದ ನೆಲದಲ್ಲಿ ಗಳಿಸಿರುವ ಲಾಭದ ಹಣವನ್ನು ಶಿಯೋಮಿ ವಿದೇಶಿ ಕಂಪನಿಗಳಿಗೆ ರಾಯಧನದ ಹೆಸರಿನಲ್ಲಿ ಅಕ್ರಮವಾಗಿ ವರ್ಗಾವಣೆ ಮಾಡಿದೆ. ಕಂಪನಿಯ ಈ ಕ್ರಮವನ್ನು ಇ.ಡಿ ಕಾನೂನು ವ್ಯಾಪ್ತಿಯಲ್ಲಿಯೇ ಪ್ರಶ್ನಿಸಿದೆ. ಈ ಸಂಬಂಧ ಅದು ಕೈಗೊಂಡಿರುವ ಕ್ರಮಗಳು ಕಾನೂನು ಬದ್ಧವಾಗಿಯೇ ಇವೆ. ಇದಕ್ಕೆ ಕಂಪನಿ ತಕರಾರು ತೆಗೆದಿರುವುದು ಸಮರ್ಥನೀಯವಲ್ಲ’ ಎಂದು ಪ್ರತಿಪಾದಿಸಿದರು.

ಉಭಯತ್ರರ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ,‘ಸದ್ಯದ ಮಟ್ಟಿಗೆ ಜಪ್ತಿಗೆ ಆದೇಶಿಸಲಾಗಿರುವ ಬ್ಯಾಂಕ್‌ ಖಾತೆಗಳಲ್ಲಿರುವ ಹಣದಲ್ಲಿ ಕಂಪನಿಯು ತನ್ನದೈನಂದಿನ ಖರ್ಚುವೆಚ್ಚಗಳಿಗಾಗಿ ಒಂದು ಸಾವಿರ ಕೋಟಿ ಮೊತ್ತವನ್ನು ಓವರ್‌ ಡ್ರಾಫ್ಟ್‌ ಪಡೆದು ಬಳಸಬಹುದು’ ಎಂದು ಆದೇಶಿಸಿ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿದೆ.

ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ಒಟ್ಟು ಆರು ಜನ ವಲಯಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿದೆ. ಇ.ಡಿ ಪರ ವಕೀಲ ಪಿ.ಪ್ರಸನ್ನಕುಮಾರ್ ಹಾಜರಾಗಿದ್ದರು.

ರಾಯಧನದ ನೆಪದಲ್ಲಿ ಅಕ್ರಮ ವರ್ಗಾವಣೆ

‘ಶಿಯೊಮಿ ಇಂಡಿಯಾ ಕಂಪನಿಯು,ಭಾರತದಲ್ಲಿ ಗಳಿಸಿದ ಹಣವನ್ನು ರಾಯಧನ ನೀಡುವ ನೆಪದಲ್ಲಿ ವಿದೇಶಿ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡುತ್ತಿದೆ. ಆದ್ದರಿಂದ, ಇದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999ರ ನಿಯಮಗಳ ಉಲ್ಲಂಘನೆ’ ಎಂಬುದು ಇ.ಡಿ ಆರೋಪ.

ಈ ಆರೋಪಗಳಿಗೆ ಸಂಬಂಧಿಸಿದಂತೆಬೆಂಗಳೂರಿನ ಇ.ಡಿ ಕಚೇರಿಯ ಸಹಾಯಕ ನಿರ್ದೇಶಕ ಎನ್‌. ಸೋಮಶೇಖರ್‌, ‘ಶಿಯೊಮಿ ಕಂಪನಿಯು ಬೆಂಗಳೂರು ನಗರದಲ್ಲಿನಸಿಟಿ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಡ್ಯೂಷ್ ಬ್ಯಾಂಕ್‌, ಎಚ್‌ಎಸ್‌ಬಿಸಿ ಬ್ಯಾಂಕ್‌ಗಳ ಚಾಲ್ತಿ ಖಾತೆ ಮತ್ತು ನಿಶ್ಚಿತ ಠೇವಣಿಗಳಲ್ಲಿ ಹೊಂದಿರುವ ₹ 5,551.27 ಬೃಹತ್‌ ಮೊತ್ತವನ್ನು ಜಪ್ತಿ ಮಾಡಬೇಕು’ ಎಂದು 2022ರ ಏಪ್ರಿಲ್‌ 29ರಂದು ಆದೇಶಿಸಿದ್ದರು.

‘ಇ.ಡಿ ಈ ರೀತಿಯ ಆದೇಶ ಹೊರಡಿಸಬಹುದು ಎಂಬ ಗುಮಾನಿಯಿಂದಲೇಏಪ್ರಿಲ್ 29ಕ್ಕೂ ಕೆಲವೇ ದಿನಗಳ ಮುನ್ನ ಸುಮಾರು ಒಂದೂವರೆ ಸಾವಿರ ಕೋಟಿಯಷ್ಟು ಮೊತ್ತದ ಹಣವನ್ನು ಶಿಯೊಮಿ ಚೀನಾದಲ್ಲಿರುವ ಸಂಸ್ಥೆಗೆ ವರ್ಗಾವಣೆ ಮಾಡಿದೆ’ ಎಂಬುದು ಇ.ಡಿ ಆಪಾದನೆ.ಶಿಯೊಮಿ ಮೊಬೈಲ್, ಸ್ಮಾರ್ಟ್‌ ಫೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ. ಇದು ಭಾರತದಲ್ಲಿ 2014ರಿಂದ ಕಾರ್ಯ ನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.