ಹೊಸಪೇಟೆ (ವಿಜಯನಗರ): ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನ ‘ಸೆಂಟ್ರಲ್ ವಿಸ್ತಾ’ದ ವಸ್ತು ಸಂಗ್ರಹಾಲಯದಲ್ಲಿ ವಿಶ್ವಪ್ರಸಿದ್ಧ ಹಂಪಿ ಸ್ಮಾರಕದ ಚಿತ್ರಗಳು ಕಂಗೊಳಿಸಲಿವೆ.
ಸೆಂಟ್ರಲ್ ವಿಸ್ತಾ ಅವೆನ್ಯೂ ಪುನರ್ ಅಭಿವೃದ್ಧಿ ಯೋಜನೆಯಡಿ ತ್ರಿಕೋನಾಕಾರದ ನೂತನ ಸಂಸತ್ ಭವನ, ವಿಜಯ ಚೌಕ್‌ನಿಂದ ಇಂಡಿಯಾ ಗೇಟ್ ವರೆಗಿನ 3 ಕಿ.ಮೀ ಉದ್ದದ ರಾಜಪಥ ಅಭಿವೃದ್ಧಿ, ಪ್ರಧಾನಿ ನೂತನ ನಿವಾಸ, ಕಚೇರಿ ಹಾಗೂ ಉಪರಾಷ್ಟ್ರಪತಿಗಳ ನೂತನ ಕಚೇರಿ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಅದೇ ರೀತಿ ಅತ್ಯಾಧುನಿಕ ವಸ್ತು ಸಂಗ್ರಹಾಲಯ ಅಭಿವೃದ್ಧಿ ಪಡಿಸಲಾಗುತ್ತಿದೆ. ದೇಶದ ಇತಿಹಾಸ, ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿನಿಧಿಸುವ ದೇಶದ ಪ್ರಮುಖ ಸ್ಮಾರಕಗಳು, ಕಟ್ಟಡಗಳ 3ಡಿ ಛಾಯಾಚಿತ್ರಗಳನ್ನು ಅಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಅದರಲ್ಲಿ ಹಂಪಿ ಸ್ಮಾರಕಗಳಿಗೂ ಪ್ರಾಮುಖ್ಯತೆ ಸಿಕ್ಕಿರುವುದು ವಿಶೇಷ.
ಹಂಪಿಯ ಮಹಾನವಮಿ ದಿಬ್ಬ, ರಾಜ ಪ್ರಾಂಗಣ, ರಾಜ ಸಭಾಂಗಣ, ಗುಪ್ತ ಮಾರ್ಗ, ವಿಜಯನಗರ ಕಾಲದ ಕಮಲಾಪುರ ಕೆರೆ, ತುರ್ತಾ ಕಾಲುವೆಯ ಚಿತ್ರಗಳು ಹಾಗೂ ಅವುಗಳ ಫೈಬರ್ ಪ್ರತಿಕೃತಿ ತಯಾರಿಸಿ, ಅವುಗಳ ಸಮಗ್ರ ಮಾಹಿತಿಯೊಂದಿಗೆ ವಸ್ತು ಸಂಗ್ರಹಾಲಯದಲ್ಲಿ ಇಡಲು ತೀರ್ಮಾನಿಸಲಾಗಿದೆ.
ವಸ್ತು ಸಂಗ್ರಹಾಲಯದ ಅಭಿವೃದ್ಧಿಯ ಹೊಣೆ ರಾಷ್ಟ್ರೀಯ ಸಂಗ್ರಹಾಲಯ ಸಂಸ್ಥೆಗೆ (ಎನ್.ಎಂ.ಐ.) ವಹಿಸಲಾಗಿದ್ದು, ಅದರ ಸಹಾಯಕ ಸಂಶೋಧಕರಾದ ಸೋನಿ ಸಚ್‌ದೇವ್ ಹಾಗೂ ಅಲಿಶಾ ಲೂಸಿಯಾ ಅವರು ಸೋಮವಾರ ಹಂಪಿ ಸ್ಮಾರಕಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ಇತಿಹಾಸಕಾರರೊಂದಿಗೆ ಸಮಾಲೋಚಿಸಿದರು.
‘ಸೆಂಟ್ರಲ್ ವಿಸ್ತಾದ ವಸ್ತು ಸಂಗ್ರಹಾಲಯದಲ್ಲಿ ದೇಶದ ಪ್ರಮುಖ ಐಕಾನಿಕ್ ಸ್ಥಳಗಳ 3ಡಿ ಛಾಯಾಚಿತ್ರ, ಪ್ರತಿಕೃತಿಗಳನ್ನು ಇರಿಸಲು ತೀರ್ಮಾನಿಸಲಾಗಿದೆ. ಅದರ ಭಾಗವಾಗಿ ಹಂಪಿಗೆ ಭೇಟಿ ನೀಡಲಾಗಿದೆ. ಈಗಾಗಲೇ ಬೆಂಗಳೂರಿನ ಕೆಲ ಐತಿಹಾಸಿಕ ಸ್ಥಳಗಳಿಗೂ ಭೇಟಿ ಕೊಡಲಾಗಿದೆ. ಹಂಪಿ ನಂತರ ಮೈಸೂರಿಗೆ ತೆರಳಿ, ಅಲ್ಲಿನ ಛಾಯಾಚಿತ್ರ, ವಿವರ ಸಂಗ್ರಹಿಸಿ ನವದೆಹಲಿಗೆ ತೆರಳಿ ಎಲ್ಲ ಮಾಹಿತಿ ಸಲ್ಲಿಸಲಾಗುವುದು’ ಎಂದು ಎನ್.ಎಂ.ಐ.ನ ಸಹಾಯಕ ಸಂಶೋಧಕಿ ಸೋನಿ ಸಚ್‌ದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.