ADVERTISEMENT

ಕೇಂದ್ರದಿಂದ ರಾಜ್ಯಕ್ಕೆ ಅನುದಾನ: ಶ್ವೇತ ಪತ್ರ ಹೊರಡಿಸಿ- ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 16:07 IST
Last Updated 3 ಫೆಬ್ರುವರಿ 2024, 16:07 IST
<div class="paragraphs"><p>ಆರ್. ಅಶೋಕ</p></div>

ಆರ್. ಅಶೋಕ

   

ಬೆಂಗಳೂರು: ‘ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮತ್ತು ನರೇಂದ್ರ ಮೋದಿ ಅವರ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಒಟ್ಟು ಎಷ್ಟು ಅನುದಾನ ಬಂದಿದೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸವಾಲು ಹಾಕಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರಾಜ್ಯಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದರು? ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಬಿಡುಗಡೆ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಲಿ. ಜನರು ತೀರ್ಮಾನ ಮಾಡಲಿ’ ಎಂದರು.

ADVERTISEMENT

‘ಕರ್ನಾಟಕದಿಂದ ಕೇಂದ್ರಕ್ಕೆ ಹೆಚ್ಚು ತೆರಿಗೆ ಕಟ್ಟುತ್ತಿದ್ದೇವೆ ನಿಜ. ಮಹಾರಾಷ್ಟ್ರದಿಂದ ಅತಿ ಹೆಚ್ಚು ತೆರಿಗೆ ಹೋಗುತ್ತಿದೆ. ಆ ರಾಜ್ಯಕ್ಕೆ ಕೇಂದ್ರ ಎಷ್ಟು ಅನುದಾನ ಕೊಟ್ಟಿದೆ? ದೆಹಲಿಗೆ ಎಷ್ಟು ಕೊಟ್ಟಿದೆ? ಎಂಬುದು ಎಲ್ಲರಿಗೂ ತಿಳಿಯಲಿ’ ಎಂದು ತಾಕೀತು ಮಾಡಿದರು.

ತಾರತಮ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ, ‘ರಾಜ್ಯಕ್ಕೆ ಬೆಂಗಳೂರಿನಿಂದ ಶೇ 65 ತೆರಿಗೆ ಬರುತ್ತದೆ. ಆದರೆ, ಬೆಂಗಳೂರಿಗೆ ಸರ್ಕಾರದಿಂದ ಶೇ 5ರಷ್ಟು ಅನುದಾನವೂ ಸಿಗುತ್ತಿಲ್ಲ. ಯಾವ ಜಿಲ್ಲೆಯಿಂದ ಎಷ್ಟು ಬರುತ್ತದೆಯೊ, ಅಷ್ಟು ಅನುದಾನ ಕೊಡಲು ಸಾಧ್ಯವೇ? ಎಲ್ಲಿ ಜನ ಕಷ್ಟದಲ್ಲಿದ್ದಾರೆ, ಎಲ್ಲಿ ಅಭಿವೃದ್ದಿ ಆಗಿಲ್ಲವೋ ಅಲ್ಲಿಗೆ ನೆರವಾಗಬೇಕು ಎಂಬುದು ಸಂವಿಧಾನದ ಆಶಯ. ಯಾವ ಮಕ್ಕಳು ಎಷ್ಟು ಸಂಪಾದನೆ ಮಾಡುತ್ತಾರೆ ಎಂಬುದರ ಮೇಲೆ ತಾಯಿ ಊಟ ನೀಡಲ್ಲ. ಮುಖ್ಯಮಂತ್ರಿಗೆ ಈ ಸಾಮಾನ್ಯ ಜ್ಞಾನ ಇರಬೇಕು’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.