ಕಲಬುರಗಿ: ಜಿಲ್ಲೆಯ ಚಿಂಚೋಳಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಸಕ್ಕರೆ ಹಾಗೂ ಇಥೆನಾಲ್ ಕಾರ್ಖಾನೆಗೆ ಕೇಂದ್ರ ಪರಿಸರ ಸಚಿವಾಲಯವೇ ಒಂದೂವರೆ ವರ್ಷದ ಹಿಂದೆ ₹ 1.5 ಕೋಟಿ ದಂಡ ವಿಧಿಸಿತ್ತು. ಅದನ್ನು ಪಾವತಿಸಿದ ಬಳಿಕವೂ ಅಗತ್ಯ ಅನುಮತಿ ಪಡೆದಿರಲಿಲ್ಲ ಎಂದು ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಟೀಕಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರದ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಲ ಮತ್ತು ವಾಯು ಮಾಲಿನ್ಯ ಮಾಡುವ ಕಾರ್ಖಾನೆಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೆ. ಅದರಂತೆ ಇದೀಗ ರಾಜ್ಯದ ವಿವಿಧ ಕಾರ್ಖಾನೆಗಳು ಕಾಯ್ದೆ ಉಲ್ಲಂಘಿಸಿದ್ದರಿಂದ ಕಾನೂನು ರೀತಿಯಲ್ಲಿ ನೋಟಿಸ್ ನೀಡಲಾಗಿದೆ. ಅದರಲ್ಲಿ ಯತ್ನಾಳ್ ಅವರಿಗೆ ಸೇರಿದ ಕಾರ್ಖಾನೆಗೆ ಪ್ರತ್ಯೇಕವಾಗಿ ಕೊಟ್ಟಿಲ್ಲ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂಬ ಯತ್ನಾಳ್ ಹೇಳಿಕೆಯೇ ಹಾಸ್ಯಾಸ್ಪದ ಎಂದು ಟೀಕಿಸಿದರು.
ಪರವಾನಗಿ ಪಡೆಯದೇ ಲಕ್ಷಾಂತರ ಟನ್ ಕಬ್ಬು ನುರಿಸಿದ್ದಾರೆ ಮತ್ತು ಬಾಯ್ಲರ್ ಅಳವಡಿಸಿದ್ದಾರೆ. ಹೀಗಾಗಿ ನಿಯಮಾವಳಿ ಪ್ರಕಾರ ನೋಟಿಸ್ ನೀಡಲಾಗಿದೆ ಎಂದರು.
ನೋಟಿಸ್ ನಂತರ ಕಾರ್ಖಾನೆ ಬಂದ್ ಮಾಡಲೇಬೇಕು. ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.