ADVERTISEMENT

ಖಾಸಗಿ ಸಂಸ್ಥೆಗಳಲ್ಲಿ ಸರ್ಟಿಫಿಕೆಟ್‌ ಕೋರ್ಸ್‌

ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ಒಡಂಬಡಿಕೆ

ಎಂ.ಮಹೇಶ
Published 16 ಅಕ್ಟೋಬರ್ 2022, 21:43 IST
Last Updated 16 ಅಕ್ಟೋಬರ್ 2022, 21:43 IST
ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೋಟ
ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೋಟ   

ಮೈಸೂರು:ಸಂಗೀತ ಶಿಕ್ಷಣದ ವ್ಯಾಪ್ತಿ ವಿಸ್ತರಿಸುವ ಉದ್ದೇಶದಿಂದ ಸಂಗೀತ ಮತ್ತು ನೃತ್ಯ ಕಲೆಗಳ ವಿಷಯದಲ್ಲಿ ಸರ್ಟಿಫಿಕೆಟ್‌ ಹಾಗೂ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸಲು 28 ಖಾಸಗಿ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಿರ್ಧರಿಸಿದೆ.

ಕರ್ನಾಟಕ ಸಂಗೀತ, ಭರತನಾಟ್ಯ, ಹಿಂದೂಸ್ತಾನಿ ಸಂಗೀತ, ಭರತನಾಟ್ಯ, ಸುಗಮ ಸಂಗೀತ, ವೀಣೆ, ಸಿತಾರ್, ವಯಲಿನ್, ಹಾರ್ಮೋನಿಯಂ ಸೇರಿದಂತೆ ಒಟ್ಟು 16 ವಿಷಯಗಳ ಕುರಿತು ಆಸಕ್ತರು ಸರ್ಟಿಫಿಕೆಟ್‌ ಅಥವಾ ಡಿಪ್ಲೊಮಾ ಸರ್ಟಿಫಿಕೆಟ್ ಕೋರ್ಸ್‌ಗಳ ಅಭ್ಯಾಸ ಮಾಡಬಹುದಾಗಿದೆ.

6 ತಿಂಗಳ ಸರ್ಟಿಫಿಕೆಟ್‌ ಕೋರ್ಸ್‌ಗೆ ಓದು–ಬರಹ ತಿಳಿದಿರುವವರು ಪ್ರವೇಶ ಪಡೆಯಬಹುದು. ಎರಡು ಸೆಮಿಸ್ಟರ್‌ಗಳನ್ನು ಒಳಗೊಂಡಿರುವ ಡಿಪ್ಲೊಮಾ ಕೋರ್ಸ್‌ ಪ್ರವೇಶಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಹೀಗೆ, ಖಾಸಗಿ ಸಂಸ್ಥೆಗಳಲ್ಲಿ ಸರ್ಟಿಫಿಕೆಟ್‌ ಅಥವಾ ಡಿಪ್ಲೊಮಾ ಕೋರ್ಸ್‌ ಪಡೆದವರು ಸಂಗೀತ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿಗೆ ಬೇಕಾದರೂ ಪ್ರವೇಶ ಪಡೆದುಕೊಳ್ಳಬಹುದು.

ADVERTISEMENT

ಇದೇ ಶೈಕ್ಷಣಿಕ ವರ್ಷದಲ್ಲಿ:‘ಸರ್ಕಾರದಿಂದ ಅನುದಾನ ಪಡೆದು ಸಂಗೀತ, ನೃತ್ಯ ಹಾಗೂ ನಾಟಕದ ವಿಷಯಗಳನ್ನು ಕಲಿಸುತ್ತಿರುವ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಇದೇ ಶೈಕ್ಷಣಿಕ ವರ್ಷದಲ್ಲಿ ಅನುಮೋದನೆ ನೀಡಲಾಗುವುದು’ ಎಂದು ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವವಿದ್ಯಾಲಯವು ಪ್ರದರ್ಶಕ ಕಲೆಗಳ ಸಾಂಪ್ರದಾಯಿಕ ಪದ್ಧತಿ ಸಂರಕ್ಷಿಸುವುದರೊಂದಿಗೆ ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ನೆಲೆಗಟ್ಟುಗಳನ್ನು ಅಳವಡಿಸಿಕೊಂಡು ಸಂಗೀತ ಮತ್ತು ಪ್ರದರ್ಶಕ ಕಲೆಗಳ ಕಲಿಕೆಗೆ ಪೂರಕ ವಾತಾವರಣವನ್ನು ಸೃಜಿಸುವತ್ತ ಮುನ್ನಡೆದಿದೆ. ಇದನ್ನು ಮತ್ತಷ್ಟು ವಿಸ್ತರಿಸಲು ಖಾಸಗಿಯವರಿಗೂ ಅವಕಾಶ ಕೊಡಲಾಗುತ್ತಿದೆ. ಸಂಗೀತ ಶಿಕ್ಷಣವು ಸಾಮಾನ್ಯ ಜನರನ್ನು ತಲುಪಬೇಕು ಎನ್ನುವುದು ಉದ್ದೇಶವಾಗಿದೆ. ಇಂತಹ ಉಪಕ್ರಮಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ–2022 (ಎನ್‌ಇಪಿ)ಯಲ್ಲೂ ಉತ್ತೇಜನ ನೀಡಲಾಗುತ್ತಿದೆ. ಹೀಗೆ, ತರಬೇತಿ ಪಡೆದವರಿಗೆ ಮುಂದೆ ಬಹಳಷ್ಟು ಅವಕಾಶಗಳಿವೆ’ ಎನ್ನುತ್ತಾರೆ ಅವರು.

‘ಕರ್ನಾಟಕ ಪ್ರೌಢಶಿಕ್ಷಣ ‍ಪರೀಕ್ಷಾ ಮಂಡಳಿಯು ಸಂಗೀತದ ವಿಷಯದಲ್ಲಿ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆ ನಡೆಸುತ್ತಿತ್ತು. ಅದಕ್ಕೆ ಪರ್ಯಾಯವಾಗಿ ಸರ್ಟಿಫಿಕೆಟ್‌ ಕೋರ್ಸ್‌ ನಡೆಸುತ್ತಿದ್ದೇವೆ. ಜಾನಪದ ಲೋಕದ ಜೊತೆಗೂ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ ಟ್ರಸ್ಟ್‌ ಜೊತೆಗೆ ಪದವಿ ಕೋರ್ಸ್‌ಗೂ ಒಪ್ಪಂದಕ್ಕೆ ಕೆಲವೇ ದಿನಗಳಲ್ಲಿ ಸಹಿ ಹಾಕಲಾಗುವುದು. ಗುರುಕುಲ ಪದ್ಧತಿಯಲ್ಲಿ ಅಲ್ಲಿ ಕಲಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.