ADVERTISEMENT

ಸಿಇಟಿಗೆ ಅರ್ಜಿ: ಸರ್ವರ್‌ ಸಮಸ್ಯೆ, ಅಭ್ಯರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 16:28 IST
Last Updated 31 ಜನವರಿ 2024, 16:28 IST
   

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ವರ್‌ ಸಮಸ್ಯೆಯಿಂದ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಪರದಾಡುವಂತಾಗಿದೆ.

ಶಾಲಾ ಶಿಕ್ಷಣ ಇಲಾಖೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಎಸ್‌ಎಟಿಎಸ್‌ ತಂತ್ರಾಂಶ (ವಿದ್ಯಾರ್ಥಿ ಸಾಮರ್ಥ್ಯ ಪತ್ತೆ ವ್ಯವಸ್ಥೆ) ಕಡ್ಡಾಯಗೊಳಿಸಿದೆ. ಈ ತಂತ್ರಾಂಶಕ್ಕೆ ವಿದ್ಯಾರ್ಥಿಗಳು ಶಾಲಾ ಹಂತದ ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಹಾಗೆ ಅಪ್‌ಲೋಡ್‌ ಮಾಡಿದ ದಾಖಲೆಗಳನ್ನೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿಗೆ ಬಳಸಿಕೊಳ್ಳುತ್ತದೆ. 

ಈಗಾಗಲೇ ಎಸ್‌ಎಸ್‌ಎಲ್‌ಸಿ ಪೂರೈಸಿ, ಪದವಿಪೂರ್ವ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಾವು ಹಿಂದೆ ಓದಿದ ಶಾಲೆಗಳ ದಾಖಲೆಗಳನ್ನು ಎಸ್‌ಎಟಿಎಸ್‌ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡಲು ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದ ಕಳೆದ 10 ದಿನಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.

ADVERTISEMENT

‘ಪ್ರತಿದಿನ ಸರಾಸರಿ 30 ಸಾವಿರದವರೆಗೆ ವಿದ್ಯಾರ್ಥಿಗಳು ದಾಖಲೆಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಸರ್ವರ್‌ ಸಮಸ್ಯೆಯ ಕಾರಣ ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಸಮಸ್ಯೆಯಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಹೆಚ್ಚುವರಿ ಸರ್ವರ್‌ ಅಳವಡಿಕೆಗೆ ಸಮ್ಮತಿಸಿದ್ದಾರೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಸಲು ಫೆ. 10 ಕೊನೆಯ ದಿನ. ಏ. 18 ಮತ್ತು 19ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.