ADVERTISEMENT

ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌:ಛಲವಾದಿ ನಾರಾಯಣಸ್ವಾಮಿ ಆಕ್ಷೇಪ–ಕೇಂದ್ರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 15:47 IST
Last Updated 12 ಅಕ್ಟೋಬರ್ 2024, 15:47 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ‘ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆಗೆ ಕಲ್ಲು ತೂರಿ–ಬೆಂಕಿ ಹಾಕಿದವರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆದ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಗೃಹ ಮತ್ತು ಕಾನೂನು ಸಚಿವಾಲಯಕ್ಕೆ ಪತ್ರ ಬರೆಯುತ್ತೇನೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ನಡೆದದ್ದು ಗಂಭೀರ ಅಪರಾಧ. ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಗಲಭೆ ನಡೆಸಿದ 150–200 ಮಂದಿ ಮೇಲಿದ್ದ ಅಪರಾಧ ಪ್ರಕರಣಗಳನ್ನು ವಾಪಸ್‌ ಪಡೆಯಲಾಗಿದೆ. ಈ ಮೂಲಕ ರಾಜ್ಯ ಸರ್ಕಾರವು ಒಂದು ಸಮುದಾಯವನ್ನು ಓಲೈಸುತ್ತಿದೆ’ ಎಂದರು.

‘ಹುಬ್ಬಳ್ಳಿ, ಮಂಗಳೂರು, ಉಡುಪಿ ಮತ್ತು ಶಿವಮೊಗ್ಗದಲ್ಲಿ ಹಿಂದೂಗಳ ಮೇಲೂ ಇಂಥ ಪ್ರಕರಣಗಳಿವೆ. ಅವುಗಳನ್ನು ಏಕೆ ವಾಪಸ್‌ ಪಡೆದಿಲ್ಲ. ಹಿಂದೂಗಳು ಮಾತ್ರ ಅಪರಾಧಿಗಳು, ಇವರು ಅಪರಾಧಿಗಳಲ್ಲವೇ? ಒಂದೇ ಒಂದು ಸಮುದಾಯದ ಪರವಾಗಿ ನಿಲ್ಲುವ ಸರ್ಕಾರ ನಮಗೆ ಬೇಕೇ’ ಎಂದು ಪ್ರಶ್ನಿಸಿದರು.

ADVERTISEMENT

‘ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಅವರನ್ನು ಬಂಧಿಸಲಾಯಿತು. ಆದರೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯನ್ನು ಬಂಧಿಸದೆ ಹಾಗೇ ಬಿಡಲಾಗಿದೆ. ಚನ್ನಾರೆಡ್ಡಿ ವಿರುದ್ಧ ಜಾತಿ ನಿಂದನೆ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿ ಮೂರು ತಿಂಗಳಾದರೂ ಬಂಧಿಸಿಲ್ಲ. ಸರ್ಕಾರ ತಮ್ಮ ಪಕ್ಷದವರನ್ನು ರಕ್ಷಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘40 ಕಾಂಗ್ರೆಸ್‌ ಶಾಸಕರಲ್ಲಿ ಅಸಮಾಧಾನ’

‘ಕಾಂಗ್ರೆಸ್‌ ಸರ್ಕಾರ ಎಲ್ಲ ವಿಷಯಗಳಲ್ಲೂ ವಿಫಲವಾಗಿದೆ. ಆ ಪಕ್ಷದ ರಾಜು ಕಾಗೆ ಅವರೇ ಅದನ್ನು ಬಯಲು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ರೈತರು ಸಾಯುತ್ತಿದ್ದಾರೆ ಎಂದು ಅವರೇ ಹೇಳಿದ್ದಾರೆ. ಈ ಸರ್ಕಾರ ಇನ್ನೆಷ್ಟು ದಿನ ಉಳಿಯಬೇಕು’ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ‘ಕಾಂಗ್ರೆಸ್‌ನ 40ಕ್ಕೂ ಹೆಚ್ಚು ಶಾಸಕರು ರಾಜು ಕಾಗೆ ಅವರಂತೆ ಅಸಮಾಧಾನದಲ್ಲೇ ಇದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಇದೆಲ್ಲಾ ಸ್ಫೋಟಗೊಳ್ಳಲಿದೆ. ಎಲ್ಲ ಪಲ್ಲಟವಾಗಲಿದೆ. ಅದರರ್ಥ ಆ ಕಡೆಯ ಕೆಲ ಜನ ನಮ್ಮ ಕಡೆ ಬರುತ್ತಾರೆ ನಾವು ಸರ್ಕಾರ ರಚಿಸುತ್ತೇವೆ ಎಂದಲ್ಲ. ನಾವು ಚುನಾವಣೆಗೆ ಹೋಗುತ್ತೇವೆಯೇ ಹೊರತು ಯಾವ ಕಾರಣಕ್ಕೂ ಅವರನ್ನು ಸೇರಿಸಿಕೊಂಡು ಸರ್ಕಾರ ರಚಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.