ADVERTISEMENT

ಮೇಲ್ಮನೆಗೆ ಛಲವಾದಿ ವಿಪಕ್ಷ ನಾಯಕ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 17:54 IST
Last Updated 22 ಜುಲೈ 2024, 17:54 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿಯು ಛಲವಾದಿ ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆದೇಶದ ಮೇರೆಗೆ ರಾಜ್ಯ ಪ್ರಭಾರಿ ರಾಧಾಮೋಹನ್‌ ದಾಸ್‌ ಅಗರ್‌ವಾಲ್‌ ಅವರು ನಾರಾಯಣಸ್ವಾಮಿ ಅವರ ನೇಮಕ ಪ್ರಕಟಿಸಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದಾಗಿ, ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಈ ಸ್ಥಾನ ಖಾಲಿಯಾಗಿತ್ತು.

ADVERTISEMENT

2018 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ ಛಲವಾದಿ ಅವರನ್ನು ಆರಂಭದಲ್ಲಿ ಪರಿಶಿಷ್ಟ ಮೋರ್ಚಾ ಅಧ್ಯಕ್ಷರನ್ನಾಗಿ ಪಕ್ಷ ನೇಮಕ ಮಾಡಿತ್ತು. ಬಳಿಕ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಯಿತು. 

ಈ ಕುರಿತು ‘ಎಕ್ಸ್‌’ ಮೂಲಕ ಪ್ರತಿಕ್ರಿಯಿಸಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪರಿಶಿಷ್ಟ ಸಮುದಾಯಗಳ ಹಾಗೂ ಸಾಂವಿಧಾನಿಕ ಹಕ್ಕುಗಳ ಪರ ನಿರಂತರ ದನಿಯಾಗಿ ಹೋರಾಟ ನಡೆಸಿಕೊಂಡು ಬಂದ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿಯವರ ನಾಯಕತ್ವ ಮತ್ತು ಪಕ್ಷದ ಮೇಲಿನ ಬದ್ಧತೆಯನ್ನು ಗುರುತಿಸಿ ಈ ಅವಕಾಶ ನೀಡಿದೆ ಎಂದು ಹೇಳಿದ್ದಾರೆ.

‘ಸ್ವಜನ ಪಕ್ಷಪಾತ ಹಾಗೂ ಹಗರಣಗಳ ವ್ಯೂಹದಲ್ಲಿ ಮುಳುಗಿ ಶೂನ್ಯ ಆಡಳಿತದಿಂದ ಜನಾಕ್ರೋಶ ಎದುರಿಸುತ್ತಿರುವ ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತಲು ನಾರಾಯಣಸ್ವಾಮಿಯವರನ್ನು ಆಯ್ಕೆ ಮಾಡಿರುವುದು ಸಮಯೋಚಿತ ನಿರ್ಧಾರ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.