ADVERTISEMENT

ದಸರಾ ಉದ್ಘಾಟನೆ | ರಾಜಕೀಯಕ್ಕೆ ಬಳಸಿಕೊಂಡ ಸಿದ್ದರಾಮಯ್ಯ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 10:52 IST
Last Updated 4 ಅಕ್ಟೋಬರ್ 2024, 10:52 IST
ಸಿದ್ದರಾಮಯ್ಯ, ಛಲವಾದಿ ನಾರಾಯಣಸ್ವಾಮಿ
ಸಿದ್ದರಾಮಯ್ಯ, ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯಕ್ಕೆ ಬಳಸಿಕೊಂಡು ದಸರಾದ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಈ ಕಾರ್ಯಕ್ರಮದಲ್ಲೂ ಮುಡಾ ಪ್ರಕರಣ ಪ್ರಸ್ತಾಪಿಸಿ, ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ತಮ್ಮ ಜೊತೆಯಲ್ಲಿದ್ದವರನ್ನು ಪ್ರೇರೇಪಿಸಿ ಸರ್ಟಿಫಿಕೇಟ್‌ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಇದು ನಾಡಿನ ಜನತೆ ಮಾಡಿದ ಅಪಮಾನ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ಮುಖ್ಯಮಂತ್ರಿಯವರ ವರ್ತನೆ ನಾಚಿಕೆಗೇಡಿನದು. ಇಂಥ ವೇದಿಕೆಗಳನ್ನು ತಮ್ಮ ರಾಜಕೀಯ ತೆವಲು ತೀರಿಸಿಕೊಳ್ಳಲು ಬಳಸಿಕೊಳ್ಳಬಾರದು. ಕರ್ನಾಟಕ ಮತ್ತು ಕನ್ನಡಕ್ಕೆ ಕೊಡುಗೆ ಕೊಟ್ಟ ಮುತ್ಸದ್ಧಿಗಳಿಂದ ದಸರಾ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಮೈಸೂರಿನ ವೈಭವ, ಮೈಸೂರು ರಾಜರ ಕೊಡುಗೆ, ರಾಜ್ಯದ ಇತಿಹಾಸ ಸ್ಮರಣೆ, ಚಾಮುಂಡಿ ತಾಯಿಯ ಸ್ಮರಣೆ ಮಾಡಬೇಕಿತ್ತು ಎಂದು ಅವರು ಹೇಳಿದರು.

ADVERTISEMENT

ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರಿಗೆ ಸಂಬಂಧಿಸಿದಂತೆ ಯಾವಾಗಲೋ ಮುಗಿದ ಹಳೇ ಪ್ರಕರಣ ಪ್ರಸ್ತಾಪಿಸಿ ರಾಜೀನಾಮೆ ಕೊಡಲಿ ಎಂದಿದ್ದಾರೆ. ಅಶೋಕ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಮುಡಾ ಹಗರಣಕ್ಕೂ ನ್ಯಾಯಾಲಯದಿಂದ ನಿರ್ದೋಷಿ ಎಂದು ತೀರ್ಪು ಪಡೆದ ಪ್ರಕರಣಕ್ಕೂ ಏಕೆ ತಾಳೆ ಹಾಕುತ್ತೀರಿ? ಕಾಂಗ್ರೆಸ್‌ನ ದೊಡ್ಡ ನಾಯಕರಿಗೆ ಇದರ ಅರಿವು ಇಲ್ಲವೆ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

ದಿನೇಶ್‌ಗೆ ಯೋಗ್ಯತೆ ಇದೆಯೇ?

‘ಸಚಿವ ದಿನೇಶ್‌ ಗುಂಡೂರಾವ್‌ ಅವರು ವೀರ ಸಾವರ್ಕರ್‌ ಅವರ ಕುರಿತು ಮಾತನಾಡಿ ಸಾವರ್ಕರ್‌ ಅವರು ಗೋಮಾಂಸ ತಿನ್ನುತ್ತಿದ್ದರು ಎಂದಿದ್ದಾರೆ. ದಿನೇಶ್‌ ಗುಂಡೂರಾವ್ ಅವರೇ ನೀವು ಗೋಮಾಂಸ ತಿನ್ನುತ್ತೀರಿ ಎಂದು ಈ ರೀತಿ ಮಾತನಾಡುವುದು ಸರಿಯೇ? ಸಾವರ್ಕರ್‌ ಬಗ್ಗೆ  ಮಾತನಾಡುವ ಯೋಗ್ಯತೆ ನಿಮಗೇನಿದೆ’ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

‘ಸಾವರ್ಕರ್‌ ಮಾಂಸಹಾರಿ, ಗೋಮಾಂಸ ತಿನ್ನುತ್ತಾರೆ ಎಂದು ಯಾವ ಚರಿತ್ರೆಯಲ್ಲಿ ನೀವು ಓದಿದ್ದೀರಿ? ನಿಮ್ಮ ಬಗ್ಗೆ ಎಲ್ಲರಿಗೂ ಗೊತ್ತಿದೆ? ನೀವೇನು? ನಿಮ್ಮ ಚರಿತ್ರೆ ಏನು ಎಂದು ಎಲ್ಲರಿಗೂ ಗೊತ್ತಿದೆ. ನೀವು ಶಿವಾಜಿನಗರದಲ್ಲಿ ಎಲ್ಲೆಲ್ಲಿ ಏನೇನು ತಿನ್ನುತ್ತೀರೆಂದು ಇಡೀ ಶಿವಾಜಿನಗರವೇ ಹೇಳುತ್ತದೆ’ ಎಂದು ಅವರು ಕುಟುಕಿದರು.

ಉಪಮುಖ್ಯಮಂತ್ರಿಯವರ ವಿಧಾನಸಭಾ ಕ್ಷೇತ್ರದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ತಡೆಯಲಾಗಿದೆ. ಕಾಂಗ್ರೆಸ್ಸಿಗರು ದಲಿತರ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಾರೆ. ಉಪಮುಖ್ಯಮಂತ್ರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಅವರೇ ಮುಂದೆ ನಿಂತು ದಲಿತರನ್ನು ದೇಗುಲದೊಳಗೆ ‍ಪ್ರವೇಶ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.