ADVERTISEMENT

ಹುಬ್ಬಳ್ಳಿ ಗಲಭೆ | ಎಫ್‌ಐಆರ್ ರದ್ದು: ರಾಷ್ಟ್ರಪತಿ, ಪ್ರಧಾನಿಗೆ ಛಲವಾದಿ ಪತ್ರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:28 IST
Last Updated 15 ಅಕ್ಟೋಬರ್ 2024, 14:28 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ‘ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಸಮಾಜಘಾತುಕ ಶಕ್ತಿಗಳ ಮೇಲಿನ ಕೇಸು ಹಿಂದಕ್ಕೆ ಪಡೆದಿರುವ ಮೂಲಕ ಕಾಂಗ್ರೆಸ್‌ ಸರ್ಕಾರ ಸಂವಿಧಾನ ಉಲ್ಲಂಘಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಷ್ಟ್ರಪತಿ, ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಣಯವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದೂ ಒತ್ತಾಯಿಸಿದ್ದಾರೆ.

‘ಇಸ್ಲಾಂ ಕುರಿತಂತೆ ವ್ಯಕ್ತಿಯೊಬ್ಬರು ಅವಹೇಳನಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು 2022ರ ಏಪ್ರಿಲ್‌ 16 ರಂದು ದುಷ್ಕರ್ಮಿಗಳು ಪೊಲೀಸ್‌ ಠಾಣೆಗೆ ನುಗ್ಗಿ, ಬಂಧಿತ ಆರೋಪಿಯನ್ನು ತಮಗೆ ಒಪ್ಪಿಸಬೇಕು ಎಂದು ದಾಂದಲೆ ನಡೆಸಿ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಇದರ ಪರಿಣಾಮ ಇಡೀ ಹುಬ್ಬಳ್ಳಿ ನಗರವನ್ನೇ ಬಂದ್‌ ಮಾಡಬೇಕಾದ ಸ್ಥಿತಿ ಬಂದಿತು. ಈ ಗಲಭೆಯಲ್ಲಿ ದಾಂದಲೆ ನಡೆಸಿದವರ ಮೇಲಿದ್ದ ಎಫ್‌ಐಆರ್ ಅನ್ನು ಕಾಂಗ್ರೆಸ್‌ ಸರ್ಕಾರ  ರದ್ದು ಮಾಡಿದೆ. ಸರ್ಕಾರದ ಈ ಕ್ರಮ ಸಂವಿಧಾನ ವಿರೋಧಿ ಮತ್ತು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದವರಿಗೆ ಪ್ರೋತ್ಸಾಹ ನೀಡಿದಂತಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಸರ್ಕಾರದ ಈ ನಿರ್ಧಾರದ ಪರಿಣಾಮವಾಗಿ, ದೇಶ ವಿರೋಧಿ ಸಂಘಟಿತ ಅಪರಾಧದಲ್ಲಿ ತೊಡಗಿದವರು ಮುಂದೆಯೂ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಅಪಾಯಕ್ಕೆ ದಾರಿ ಮಾಡಿಕೊಡಲಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.