ADVERTISEMENT

ಇಂದು ಚಾಮುಂಡಿಬೆಟ್ಟದ ಪಾರ್ಕಿಂಗ್‌, ವಾಣಿಜ್ಯ ಮಳಿಗೆ ಲೋಕಾರ್ಪಣೆ

ಸಂಚಾರ ದಟ್ಟಣೆಗೆ ಕೊನೆಗೂ ಪರಿಹಾರ; ಮುಕ್ತಿಕಂಡ ಕಾಮಗಾರಿ

ಪ್ರಜಾವಾಣಿ ವಿಶೇಷ
Published 29 ಸೆಪ್ಟೆಂಬರ್ 2019, 4:53 IST
Last Updated 29 ಸೆಪ್ಟೆಂಬರ್ 2019, 4:53 IST
ಚಾಮುಂಡಿಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸಿರುವ ಪಾರ್ಕಿಂಗ್‌ ಜಾಗದಲ್ಲಿ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿರುವುದು
ಚಾಮುಂಡಿಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸಿರುವ ಪಾರ್ಕಿಂಗ್‌ ಜಾಗದಲ್ಲಿ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿರುವುದು   

ಮೈಸೂರು: ಚಾಮುಂಡಿ ಬೆಟ್ಟದ ಮೇಲಿನ ಸಂಚಾರ ದಟ್ಟಣೆಗೆ ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿದೆ. ಸದಾ ವಾಹನಗಳ ಗದ್ದಲಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ತಲೆಎತ್ತಿರುವ ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆ ಉದ್ಘಾಟನೆಗೆ ಅಣಿಗೊಂಡಿದೆ. ಸುಮಾರು ಆರು ವರ್ಷಗಳಿಂದ ಕುಂಟುತ್ತಾ ಸಾಗಿದ ಕಾಮಗಾರಿ ಇದೀಗ ಕೊನೆಯ ಹಂತಕ್ಕೆ ತಲುಪಿದ್ದು, ಇದೇ ಸೆ.29ರಂದು ಉದ್ಘಾಟನೆಯಾಗಲಿದೆ.

₹80 ಕೋಟಿ ವೆಚ್ಚದಲ್ಲಿ ಸುಮಾರು 8 ಎಕರೆಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡವು ಇಲ್ಲಿನ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಾಣಗೊಂಡಿದೆ. ಏಕಕಾಲಕ್ಕೆ 600 ಕಾರು, 1 ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ವಿನಯ್‌ಕುಮಾರ್‌ ಮಾಹಿತಿ ನೀಡಿದರು.

ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿ, ದೇವಸ್ಥಾನಕ್ಕೆ ಪ್ರವೇಶಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ನೂಕುನುಗ್ಗಲು ತಡೆಯಲು ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಬಿಸಿಲು ತಾಗದಂತೆ ಚಾವಣಿ ಇದ್ದು, ಉತ್ತಮ ಗಾಳಿ– ಬೆಳಕು ಬರುವಂತೆ ವಿನ್ಯಾಸ ಮಾಡಲಾಗಿದೆ. ಸರತಿಸಾಲಿನಲ್ಲೇ ನಾಲ್ಕು ಶೌಚಾಲಯದ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದರಿಂದ ವಿಶೇಷ ಸಂದರ್ಭದಲ್ಲಿ ದೇವಸ್ಥಾನದ ಒಳಭಾಗದಲ್ಲಿ ಜನಸಂದಣಿ ಕಡಿಮೆಯಾಗಲಿದೆ.

ADVERTISEMENT

ಇದಲ್ಲದೇ, ದೇವಸ್ಥಾನದಲ್ಲಿ ಸುತ್ತಲೂ ಹರಡಿರುವ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ, ಹೊಸ ವಾಣಿಜ್ಯ ಮಳಿಗೆಗೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಬಹುಮಹಡಿ ಕಟ್ಟಡದ ಮೇಲ್ಭಾಗದಲ್ಲಿ 116 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ.

ದಸರಾ ಉದ್ಘಾಟನಾ ಸಮಾರಂಭದ ಕ್ಷಣಕ್ಷಣದ ಮಾಹಿತಿ:ದಸರಾ LIVE | ನಾನು ದೇವರನ್ನು ನಂಬುತ್ತೇನೆ: ಭೈರಪ್ಪ

ಮಹಿಷಾಷುರ ಪ್ರತಿಮೆವರೆಗೂ ಕಾಂಕ್ರೀಟ್‌ ರಸ್ತೆ ನಿರ್ಮಾಣ, ₹9.30 ಕೋಟಿ ವೆಚ್ಚದಲ್ಲಿ ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿಬೆಟ್ಟದವರೆಗೂ 8 ಕಿ.ಮೀ. ರಸ್ತೆ ನಿರ್ಮಾಣ, 2.4 ಕಿ.ಮೀ ಉದ್ದದ ನಂದಿ ರಸ್ತೆಯ ಡಾಂಬರೀಕರಣ, ಚರಂಡಿ ತಡೆಗೋಡೆ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದ್ದು, ದೇವಾಲಯದ ಎದುರು ಕಲ್ಲು ಹಾಸುವ ಕೆಲಸ, ದೇವಸ್ಥಾನದ ಗೋಪುರಕ್ಕೆ ಬಣ್ಣ ಬಳಿಯುವ ಕೆಲಸ ಎಲ್ಲವೂ ಅಂತಿಮ ಹಂತಕ್ಕೆ ತಲುಪಿದೆ.

ಕಟ್ಟಡ ನಿರ್ಮಾಣದ ಖರ್ಚು ವೆಚ್ಚ

₹80 ಕೋಟಿ - ಪಾರ್ಕಿಂಗ್‌ ಜಾಗಕ್ಕೆ ಖರ್ಚಾದ ಮೊತ್ತ

8 ಎಕರೆ - ಪಾರ್ಕಿಂಗ್‌ ಜಾಗ ಹೊಂದಿರುವ ಒಟ್ಟು ವಿಸ್ತೀರ್ಣ

600 - ವಾಹನಗಳಿಗೆ ತಂಗುದಾಣ

1 ಸಾವಿರ - ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ

130 ಮಳಿಗೆ - ಹೊಸತಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ

450 ಮೀಟರ್ - ಪಾರ್ಕಿಂಗ್‌ ಜಾಗದಿಂದ ದೇವಸ್ಥಾನಕ್ಕೆ ಇರುವ ಪಾದಚಾರಿ ಮಾರ್ಗದ ಅಂತರ

4 - ಶೌಚಾಲಯ

ಇಂದು ಉದ್ಘಾಟನೆ

ಚಾಮುಂಡೇಶ್ವರಿ ದೇವಾಲಯದ ಅಭಿವೃದ್ಧಿ ಕಾಮಗಾರಿಗಳನ್ನು ಇಂದು (ಸೆ.29) ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಜಿ.ಟಿ.ದೇವೇಗೌಡ, ಎಲ್‌.ನಾಗೇಂದ್ರ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಯತಿರಾಜ್‌ ಮಾಹಿತಿ ನೀಡಿದರು.

ಪಂಚಾಯಿತಿಗೆ ಸೇರಿದ್ದು: ಬೆಟ್ಟದ ಮೇಲಿರುವ ಪರವಾನಗಿದಾರರಿಗೆ ಈಗಾಗಲೇ ನೂತನ ವಾಣಿಜ್ಯ ಮಳಿಗೆಯಲ್ಲಿ ಮಳಿಗೆಗಳನ್ನು ನೀಡಲಾಗಿದ್ದು, ಉಳಿದವರಿಗೆ ಮಳಿಗೆ ನೀಡುವ ಕುರಿತಂತೆ ಸ್ಥಳೀಯ ಗ್ರಾಮ ಪಂಚಾಯಿತಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

***

ಅಂತಿಮ ಹಂತದ ಕಾಮಗಾರಿ ನಡೆಯುತ್ತಿದ್ದು, ಸೆ.29ಕ್ಕೆ ಉದ್ಘಾಟನೆಯಾಗಲಿದೆ. ಆ ವೇಳೆಗೆ ಎಲ್ಲ ಕೆಲಸಗಳೂ ಮುಕ್ತಾಯಗೊಂಡು, ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತದೆ

ವಿನಯ್‌ ಕುಮಾರ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

116 ಮಳಿಗೆಗಳ ಪೈಕಿ, 101 ಮಳಿಗೆಯನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ದಸರಾ ಮುಗಿದ ಬಳಿಕವೇ ವಾಹನಗಳ ಪಾರ್ಕಿಂಗ್‌ಗೆ ಸಂಬಂಧಿಸಿದ ಶುಲ್ಕ ನಿಗದಿಪಡಿಸಲಾಗುತ್ತದೆ.

ಯತಿರಾಜ್‌, ಕಾರ್ಯನಿರ್ವಹಣ ಅಧಿಕಾರಿ ಚಾಮುಂಡೇಶ್ವರಿ ದೇವಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.