ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆಗಿದೆ. ದೇಶದೆಲ್ಲೆಡೆ ಸಂತಸ ಮನೆಮಾಡಿದ್ದು, ಗಣ್ಯರು ಸೇರಿದಂತೆ ದೇಶದ ಜನತೆ ಇಸ್ರೊ ವಿಜ್ಞಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು (ಗುರುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೀಣ್ಯದಲ್ಲಿರುವ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಚಂದ್ರಯಾನ–3ರ ಯಶಸ್ಸಿಗೆ ಕಾರಣರಾದ ಇಸ್ರೊ ಅಧ್ಯಕ್ಷರಾದ ಎಸ್. ಸೋಮನಾಥ್ ಸೇರಿದಂತೆ ಎಲ್ಲ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದ್ದಾರೆ. ಈ ವೇಳೆ ಎಸ್. ಸೋಮನಾಥ್ ಹಾಗೂ ಇತರ ವಿಜ್ಞಾನಿಗಳಿಗೆ ಸಿದ್ದರಾಮಯ್ಯನವರು ಸಿಹಿ ತಿನಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ಆಗಸ್ಟ್ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಬುಧವಾರ (ಆಗಸ್ಟ್ 23) ಸಂಜೆ 6.04ಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಇಸ್ರೊದ ಶ್ರಮ ಫಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.