ಬೆಂಗಳೂರು: ‘ಶಾಲೆ ಮತ್ತು ಆಸ್ಪತ್ರೆ ಕಾಮಗಾರಿಗಳನ್ನೂ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ನಿರ್ವಹಿಸಲು ನಿಯಮಗಳಿಗೆ ಕೆಲವೇ ದಿನಗಳಲ್ಲಿ ಬದಲಾವಣೆ ತರಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಶುಕ್ರವಾರ ಆಯೋಜಿಸಿದ್ದ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಮಹಾತ್ಮ ಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬಾಪೂಜಿ ತಂತ್ರಾಂಶ–2ಕ್ಕೆ ಚಾಲನೆ ನೀಡಲಾಗಿದ್ದು, ಇದೊಂದು ಕ್ರಾಂತಿಕಾರಕ ತೀರ್ಮಾನ. ಇದರಿಂದ ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುವುದು ತಪ್ಪಲಿದೆ’ ಎಂದರು.
ಅತ್ಯುತ್ತಮ ಜಿಲ್ಲಾ ಪಂಚಾಯಿತಿ ಪುರಸ್ಕಾರದ ಮೊದಲ ಬಹುಮಾನ ಬೆಂಗಳೂರು ಗ್ರಾಮಾಂತರ ಜಿಲ್ಲೆ (₹15 ಲಕ್ಷ), ದ್ವಿತೀಯ ಬಹುಮಾನ ಶಿವಮೊಗ್ಗ (₹12.50 ಲಕ್ಷ), ತೃತೀಯ ಬಹುಮಾನ ಬಳ್ಳಾರಿ ಮತ್ತು ಬಾಗಲಕೋಟೆಗೆ (ತಲಾ ₹10 ಲಕ್ಷ)
ನೀಡಲಾಯಿತು.
ತಾಲ್ಲೂಕು ಪಂಚಾಯಿತಿ ವಿಭಾಗದಲ್ಲಿ ಪ್ರಥಮ ಬಹುಮಾನ ಗುಳೇದಗುಡ್ಡ (₹10 ಲಕ್ಷ), ಎರಡನೇ ಬಹುಮಾನ ದೊಡ್ಡಬಳ್ಳಾಪುರ (7.50 ಲಕ್ಷ), ಮೂರನೇ ಬಹುಮಾನವನ್ನು ಭದ್ರಾವತಿ (₹5 ಲಕ್ಷ) ಪಡೆದುಕೊಂಡಿತು.
ಗ್ರಾಮ ಪಂಚಾಯಿತಿ ವಿಭಾಗದಲ್ಲಿ ಮುಧೋಳದ ಹಲಗಲಿ, ಹಾಸನದ ಮಾಡಬಾಳ, ಕುಂದಾಪುರದ ಹಕ್ಲಾಡಿ, ಕೊಡಗಿನ ದೇವರಪುರ,
ದೊಡ್ಡಬಳ್ಳಾಪುರದ ತೂಬಗೆರೆ ಪಂಚಾಯಿತಿಗಳು ಅತ್ಯುತ್ತಮ ವಿಭಾಗಕ್ಕೆ ಆಯ್ಕೆಯಾಗಿದ್ದು, ತಲಾ ₹5 ಲಕ್ಷ ಬಹುಮಾನಕ್ಕೆ ಪಾತ್ರವಾಗಿವೆ.
ಗ್ರಾ.ಪಂ ಸದಸ್ಯರಿಂದ ಪ್ರತಿಭಟನೆ
ಗಾಂಧಿ ಗ್ರಾಮ ಪುರಸ್ಕಾರ ಕಾರ್ಯಕ್ರಮ ಕೊನೆಯಲ್ಲಿ ಗೊಂದಲದ ಗೂಡಾಗಿ, ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
2019–20ರಿಂದ ಈವರೆಗಿನ ಮೂರು ವರ್ಷಗಳ ಗಾಂಧಿ ಪುರಸ್ಕಾರಕ್ಕೆ ಒಟ್ಟು 585 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿತ್ತು. ಗ್ರಾಮ ಪಂಚಾಯಿಗಳ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸಲಾಗಿತ್ತು. ಮುಖ್ಯಮಂತ್ರಿ ಸಾಂಕೇತಿಕವಾಗಿ ಕೆಲವರಿಗೆ ಪುರಸ್ಕಾರ ನೀಡಿದರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೂ ಕೆಲವರಿಗೆ ಪ್ರಶಸ್ತಿ ಫಲಕ ವಿತರಿಸಿದರು.
ಇನ್ನೂ ನೂರಾರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರು ಸಾಲಿನಲ್ಲೇ ನಿಂತಿದ್ದರಿಂದ ನೂಕು ನುಗ್ಗಲು ಏರ್ಪಟ್ಟಿತು. ಗ್ರಾಮ ಪಂಚಾಯಿತಿಗೇ ಫಲಕಗಳನ್ನು ಕಳುಹಿಸುವುದಾಗಿ ಘೋಷಿಸಿ ಕಾರ್ಯಕ್ರಮ ಅಂತ್ಯಗೊಳಿಸಲಾಯಿತು. ಇದು ದೂರದ ಜಿಲ್ಲೆಗಳಿಂದ ಬಂದಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
‘ಚುನಾಯಿತ ಸದಸ್ಯರನ್ನು ಆಹ್ವಾನಿಸಿ ಪುರಸ್ಕಾರವನ್ನೂ ನೀಡದೇ ಬರಿಗೈನಲ್ಲಿ ವಾಪಸ್ ಕಳುಹಿಸುತ್ತಿರುವ ಬಿಜೆಪಿ ಸರ್ಕಾರದ ಬೇಜವಾಬ್ದಾರಿಗೆ ಇದು ಉದಾಹರಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.