ADVERTISEMENT

ಬೆಟ್ಟಿಂಗ್‌ ತಡೆಗಾಗಿ ಯೋಗೇಶ್ವರ್ ಹೇಳಿಕೆ: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 16:24 IST
Last Updated 15 ನವೆಂಬರ್ 2024, 16:24 IST
ಡಿ.ಕೆ. ಸುರೇಶ್
ಡಿ.ಕೆ. ಸುರೇಶ್   

ಬೆಂಗಳೂರು: ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಜನರು, ಕಾರ್ಯಕರ್ತರು ಬೆಟ್ಟಿಂಗ್‌ ಕಟ್ಟಿ ಹಣ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಯೋಗೇಶ್ವರ್ ಅವರು ಹಾಗೆ ಮಾತನಾಡಿದ್ದಾರೆ’ ಎಂದು ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಹೇಳಿದರು.

ಯೋಗೇಶ್ವರ್ ಸೋಲುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರು ಪ್ರಶ್ನಿಸಿದಾಗ, ‘ನಮಗೆ ಗೆಲ್ಲುವ ವಿಶ್ವಾಸವಿದೆ. ನಮ್ಮಿಂದಾಗಿ ಜನರು ಹಣ ಕಳೆದುಕೊಳ್ಳಬಾರದು ಎಂಬುದು ಯೋಗೇಶ್ವರ್ ಅವರ ಮಾತು’ ಎಂದರು. 

ಎಚ್‌.ಡಿ.ಕುಮಾರಸ್ವಾಮಿ ಕುರಿತ ಜಮೀರ್ ಅಹಮದ್‌ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ‘ಅವರಿಬ್ಬರೂ ಸ್ನೇಹಿತರು. ಈ ಹಿಂದೆ ಹಲವು ಬಾರಿ ಹಾಗೆ ಕರೆದುಕೊಂಡಿದ್ದಾರೆ. ಮಾಧ್ಯಮಗಳು ಆಗಲೇ ಆ ಬಗ್ಗೆ ಎಚ್ಚರಿಸಿದ್ದರೆ, ಅವರು ಸರಿಪಡಿಸಿಕೊಳ್ಳುತ್ತಿದ್ದರು. ಆದರೆ ಈಗ ಮತದಾನಕ್ಕೆ ಒಂದೆರಡು ದಿನ ಇರುವಾಗ ಮಾಧ್ಯಮಗಳು ಅದನ್ನು ದೊಡ್ಡದಾಗಿ ಬಿಂಬಿಸಿದವು. ಮಾಧ್ಯಮಗಳಿಗೆ ನಮ್ಮ ಪಕ್ಷದ ಮೇಲೆ ಇಷ್ಟು ಕೋಪವೇಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ಜಮೀರ್ ಅವರ ಹೇಳಿಕೆಯಿಂದ ಪಕ್ಷಕ್ಕೆ ಧಕ್ಕೆಯಾಗಿದೆಯೋ, ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ’ ಎಂದೂ ಹೇಳಿದರು.

‘ಚುನಾವಣೆಗಾಗಿ ವಕ್ಫ್ ಗದ್ದಲ’
‘ರೈತರ ಜಮೀನಿನ ಖಾತೆಯನ್ನು ವಕ್ಫ್‌ಗೆ ಬದಲಾಯಿಸುವುದು 2019ರಿಂದ ನಡೆಯುತ್ತಿದ್ದರೂ ಉಪಚುನಾವಣೆ ಬಂದಾಗಲೇ ಆ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ವಿರೋಧ ಪಕ್ಷಗಳನ್ನು ಮಾಧ್ಯಮಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ’ ಎಂದು ಡಿ.ಕೆ.ಸುರೇಶ್‌ ಹೇಳಿದರು. ‘ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ಹೆಚ್ಚು ಬದಲಾವಣೆ ಆಗಿದ್ದು 2019ರಿಂದ 2022ರ ನಡುವೆ. ಆ ಅವಧಿಯಲ್ಲಿ ಬಿಜೆಪಿ ಸರ್ಕಾರವಿತ್ತು. ಚನ್ನಪಟ್ಟಣದಲ್ಲೂ 2019ರಲ್ಲಿ ಪಹಣಿ ಬದಲಾವಣೆ ಮಾಡಲಾಗಿದೆ. ಆಗ ಚರ್ಚೆಯಲ್ಲಿ ಇಲ್ಲದ ವಿಚಾರ ಈಗ ಬಂದಿದ್ದೇಕೆ’ ಎಂದು ಪ್ರಶ್ನಿಸಿದರು. ‘ಚುನಾವಣೆ ಬಂದಾಗಲಷ್ಟೇ ಜಾತಿ ಧರ್ಮ ಎಲ್ಲವೂ ಮುನ್ನೆಲೆಗೆ ಬರುತ್ತಿದೆ. ಮತದಾನದ ದಿನ ಮಧ್ಯಾಹ್ನದವರೆಗೂ ಸುದ್ದಿವಾಹಿನಿಗಳು ಅದನ್ನೇ ಚರ್ಚೆ ಮಾಡಿದವು. ಈ ವಿಚಾರದಲ್ಲಿ ವಿರೋಧ ಪಕ್ಷಗಳ ರಾಜಕೀಯಕ್ಕೆ ಮಾಧ್ಯಮಗಳು ಅಸ್ತ್ರವಾಗುತ್ತಿವೆ’ ಎಂದರು.
‘ಜಮೀರ್ ಹೇಳಿಕೆಯಿಂದ ಧಕ್ಕೆ’
ಬೆಂಗಳೂರು: ‘ಕುಮಾರಸ್ವಾಮಿ ಕುರಿತ ಸಚಿವ ಜಮೀರ್ ಅಹಮದ್‌ ಅವರ ಹೇಳಿಕೆಯಿಂದ ಪಕ್ಷಕ್ಕೆ ಧಕ್ಕೆಯಾಗಿರಬಹುದು. ಅದು ನಮಗೆ ಉಲ್ಟಾ ಆಗಬಹುದು’ ಎಂದು ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು. ‘ಈ ಹಿಂದೆ ಅರಗ ಜ್ಞಾನೇಂದ್ರ ಅವರು ಖರ್ಗೆ ಅವರನ್ನು ಕರಿಯ ಎಂದಿದ್ದರು. ಅದನ್ನು ಮಾಧ್ಯಮಗಳು ಸುದ್ದಿ ಮಾಡಲಿಲ್ಲ. ಆದರೆ ಜಮೀರ್ ಅವರು ಹೇಳಿದ್ದನ್ನು ದೊಡ್ಡದು ಮಾಡಿದಿರಿ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ‘ಚನ್ನಪಟ್ಣದಲ್ಲಿ ಯಾರು ಬೇಕಾದರೂ ಗೆಲ್ಲಬಹುದು ಎಂದು ಯೋಗೇಶ್ವರ್ ಹೇಳಿರುವ ಮಾತನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಅವರಿಗೆ ಕ್ಷೇತ್ರದ ಮತದಾರರ ನಾಡಿಮಿಡಿತ ಗೊತ್ತಿದೆ. ಜೆಡಿಎಸ್‌ನವರು ಗೆದ್ದರೆ ಭಾರಿ ಅಂತರದಲ್ಲಿ ಗೆಲ್ಲುತ್ತಾರೆ. ನಾವು ಗೆದ್ದರೆ 500–600 ಮತಗಳ ಅಂತರದಲ್ಲಿ ಗೆಲ್ಲಬಹುದು’ ಎಂದರು. ‘ಅವರೂ ಕೊಚ್ಚೆಯೇ’: ನಾಲ್ವರು ಕೊಚ್ಚೆ ಅವರಿಂದ ದೂರ ಇದ್ದೇನೆ ಎಂದ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ‘ಜಮೀರ್‌ ಪುಟ್ಟಣ ಬಾಲಕೃಷ್ಣ ಅವರಿಂದ ಮುಖ್ಯಮಂತ್ರಿಯಾದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಅವರಿಗೆ ವಿರೋಧವಾಗಿ ಇದ್ದೇವೆಂದು ನಮ್ಮನ್ನು ಕೊಚ್ಚೆ ಎಂದಿದ್ದಾರೆ. ಪರಸ್ಪರ ತಬ್ಬಿಕೊಂಡ ಮೇಲೆ ಅವರೂ ಕೊಚ್ಚೆಯೇ ಅಲ್ಲವೇ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.