ADVERTISEMENT

By Election: ಯೋಗೇಶ್ವರ್ ಎಂಬ ಚನ್ನಪಟ್ಟಣದ ಪಕ್ಷಾಂತರ ಹಕ್ಕಿಯ ಹಾದಿ..

ಪಕ್ಷಾಂತರ ರಾಜಕಾರಣದಲ್ಲೇ ಅಸ್ತಿತ್ವ ಕಂಡುಕೊಂಡಿರುವ ಯೋಗೇಶ್ವರ್

ಓದೇಶ ಸಕಲೇಶಪುರ
Published 23 ಅಕ್ಟೋಬರ್ 2024, 11:01 IST
Last Updated 23 ಅಕ್ಟೋಬರ್ 2024, 11:01 IST
<div class="paragraphs"><p>By Election: ಯೋಗೇಶ್ವರ್ ಎಂಬ ಚನ್ನಪಟ್ಟಣದ ಪಕ್ಷಾಂತರ ‘ಹಕ್ಕಿ’ಯ ಹಾದಿ..</p></div>

By Election: ಯೋಗೇಶ್ವರ್ ಎಂಬ ಚನ್ನಪಟ್ಟಣದ ಪಕ್ಷಾಂತರ ‘ಹಕ್ಕಿ’ಯ ಹಾದಿ..

   

ರಾಮನಗರ: ಚನ್ನಪಟ್ಟಣ ರಾಜಕಾರಣದ ಚದುರಂಗದಲ್ಲಿ ಪಕ್ಷಾಂತರ ಮಾಡಿಕೊಂಡೇ ರಾಜಕೀಯ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಚತುರ ರಾಜಕಾರಣಿ ಸಿ.ಪಿ. ಯೋಗೇಶ್ವರ್.

ಭಾರಿ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಸೇರಿ ಕಣಕ್ಕಿಳಿಯಲು ಸನ್ನದ್ದನಾಗಿರುವ ‘ಸೈನಿಕ’ನಿಗಿದು ಆರನೇ ಪಕ್ಷಾಂತರ.

ADVERTISEMENT

25 ವರ್ಷಗಳಿಂದ ರಾಜಕಾರಣದಲ್ಲಿ ಸಕ್ರಿಯವಾಗಿರುವ ಯೋಗೇಶ್ವರ್ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷ ಸೇರಿದಂತೆ ಮೂರು ಪಕ್ಷಗಳಿಗೆ ಜಿಗಿದು ರಾಜಕಾರಣ ಮಾಡಿದ್ದಾರೆ. ಒಮ್ಮೆ ಸಮಾಜವಾದಿ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿಗೆ ತಲಾ ಎರಡು ಸಲ ಪಕ್ಷಾಂತರ ಮಾಡಿದ್ದ ಅವರು, ಇದೀಗ ಮತ್ತೆ ಕಾಂಗ್ರೆಸ್‌ಗೆ ಬಂದಿದ್ದಾರೆ.

ಉದ್ಯಮಿಯಾಗಿದ್ದ ಯೋಗೇಶ್ವರ್ ರಾಜಕೀಯ ಪಯಣ ಶುರುವಾಗಿದ್ದು ಕಾಂಗ್ರೆಸ್‌ನಿಂದ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ (ಕೆಪಿಸಿಸಿ) ಕಾರ್ಯದರ್ಶಿಯಾಗಿದ್ದ ಅವರು, 1999ರ ಚುನಾವಣೆಗೆ ಪಕ್ಷದಿಂದ ಟಿಕೆಟ್‌ ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದರು. ಮೊದಲ ಚುನಾವಣೆಯಲ್ಲೇ ಬಂಡಾಯದ ಬಾವುಟ ಹಾರಿಸಿ ಗೆದ್ದ ಅವರು, ಮತ್ತೆ ‘ಕೈ’ ಹಿಡಿದು 2004 ಮತ್ತು 2008ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು.

2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ನಡೆದ ಆಪರೇಷನ್ ಕಮಲದ ಅಲೆಗೆ ಸಿಲುಕಿದ ಯೋಗೇಶ್ವರ್, ಒಂದೇ ವರ್ಷದಲ್ಲಿ ಕಾಂಗ್ರೆಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಮಾರನೇಯ ವರ್ಷ 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಸಿ. ಅಶ್ವಥ್ ವಿರುದ್ಧ ಪರಾಭವಗೊಂಡರು.

ಜೆಡಿಎಸ್‌ನಿಂದ ಗೆದ್ದಿದ್ದ ಅಶ್ವಥ್ ಸಹ ಒಂದು ವರ್ಷದ ಬಳಿಕ 2010ರಲ್ಲಿ ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿಗೆ ಬಂದರು. ಕ್ಷೇತ್ರಕ್ಕೆ 2011ರಲ್ಲಿ ಉಪ ಚುನಾವಣೆ ಎದುರಾಯಿತು. ಆಗ ಬಿಜೆಪಿಯಿಂದ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಯೋಗೇಶ್ವರ್, ಜೆಡಿಎಸ್‌ನ ಸಿಂ.ಲಿಂ. ನಾಗರಾಜು ವಿರುದ್ಧ ಜಯ ಸಾಧಿಸಿದರು.

2013ರ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ಮತ್ತೆ ಕಾಂಗ್ರೆಸ್‌ನತ್ತ ವಾಲಿದ ಯೋಗೇಶ್ವರ್ ಅವರಿಗೆ ಪಕ್ಷ ‘ಬಿ ಫಾರಂ’ ನೀಡಲಿಲ್ಲ. ನಾಮಪತ್ರ ಸಲ್ಲಿಕೆಗೆ ಒಂದು ದಿನ ಇರುವಾಗ ಸಮಾಜವಾದಿ ಪಕ್ಷದ (ಎಸ್‌.ಪಿ) ಟಿಕೆಟ್‌ ತಂದು ಸ್ಪರ್ಧಿಸಿದ ಅವರು, ಅಭೂತಪೂರ್ವ ಗೆಲುವು ಸಾಧಿಸಿದರು. 2018ರ ಚುನಾವಣೆ ಸಂದರ್ಭದಲ್ಲಿ ಮತ್ತೆ ಬಿಜೆಪಿಗೆ ಬಂದ ಅವರು, ಆ ವರ್ಷದ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಸೋತರು.

ಆ ವರ್ಷ ಅಧಿಕಾರಕ್ಕೇರಿದ ಬಿಜೆಪಿಯು, ಸೋತಿದ್ದ ಯೋಗೇಶ್ವರ್ ಅವರನ್ನು ವಿಧಾನ ಪರಿಷತ್‌ ಸದಸ್ಯನನ್ನಾಗಿ ಮಾಡಿ, ಸಚಿವ ಸ್ಥಾನ ನೀಡಿತು. ಆಗ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿ.ಎಂ ಕುರ್ಚಿಗೆ ಕೂರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರಿಗೆ ಮತ್ತೆ ಸಚಿನಾಗುವ ಭಾಗ್ಯ ಸಿಗಲಿಲ್ಲ.

2023ರ ಚುನಾವಣೆಯಲ್ಲಿ ಯೋಗೇಶ್ವರ್ ಮತ್ತೆ ಬಿಜೆಯಿಂದ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದರೂ ಗೆಲುವು ದಕ್ಕದೆ, ಪರಿಷತ್ ಸ್ಥಾನದಲ್ಲೇ ಮುಂದುವರಿದಿದ್ದರು. 2024 ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಿ ಗೆದ್ದಿದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ತೆರವಾಗಿರುವ ಸ್ಥಾನಕ್ಕೆ ನಡೆಯುತ್ತಿರುವ ಉಪ ಚುನಾವಣೆಗೆ ಸ್ಪರ್ಧಿಸಲು ಶುರುವಾದ ಟಿಕೆಟ್‌ ರಾಜಕಾರಣದಲ್ಲಿ ಕಾಂಗ್ರೆಸ್‌ ಕೈ ಹಿಡಿದಿರುವ ಯೋಗೇಶ್ವರ್, ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮೈತ್ರಿ ವಿರುದ್ಧ ಅವರು ಸ್ಪರ್ಧಿಸುವುದು ಖಚಿತವಾಗಿದೆ.

ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದ ಶಿಕ್ಷಕ ಪುಟ್ಟಮಾದೇಗೌಡರ ಪುತ್ರನಾದ ಯೋಗೇಶ್ವರ್, ಯಾರ ಆಸರೆಯೂ ಇಲ್ಲದೆ ಸ್ವಂತ ಬಲದಲ್ಲಿ ಬೆಳೆದ ರಾಜಕಾರಣಿ. ಕಳೆದ 25 ವರ್ಷಗಳಿಂದ ಚನ್ನಪಟ್ಟಣ ರಾಜಕಾರಣದಲ್ಲಿ ಸಕ್ರಿಯವಾಗಿರುವ ಅವರು ಉದ್ಯಮಿ, ಸಿನಿಮಾ ನಟ ಹಾಗೂ ರಾಜಕಾರಣಿಯಾಗಿ ಪರಿಚಿತ. ಯಾವ ಪಕ್ಷಗಳ ನಿಯಂತ್ರಣಕ್ಕೂ ಸಿಗದ ಅವರು, ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ.

ಯೋಗೇಶ್ವರ್ ಪಕ್ಷಾಂತರ ಹಾದಿ

1999: ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ ಸಿಗದಿದ್ದಾಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು.

2004: ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು.

2008: ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಿ ಗೆಲುವು

2008: ಆಪರೇಷನ್ ಕಮಲದ ಸಂದರ್ಭದಲ್ಲಿ ಒಂದೇ ವರ್ಷಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆ

2009: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋಲು.

2009: ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ಎಂ.ಸಿ. ಅಶ್ವಥ್ ವಿರುದ್ಧ ಸೋಲು.

2011: ಜೆಡಿಎಸ್ ಶಾಸಕ ಅಶ್ವಥ್ ರಾಜೀನಾಮೆಯಿಂದ ನಡೆದ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಜೆಡಿಎಸ್‌ನ ಸಿಂ.ಲಿಂ. ನಾಗರಾಜು ವಿರುದ್ಧ ಗೆಲುವು.

2013: ಕಾಂಗ್ರೆಸ್‌ಗೆ ಸೇರ್ಪಡೆಯಾದರೂ ಸ್ಪರ್ಧೆಗೆ ‘ಬಿ ಫಾರಂ’ ಸಿಗದಿದ್ದರಿಂದ ಮತ್ತೆ ಪಕ್ಷಕ್ಕೆ ಗುಡ್‌ಬೈ.

2013: ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು

2018: ಸಮಾಜವಾದಿ ಪಕ್ಷ ತೊರೆದು ಬಿಜೆಪಿಯಿಂದ ಮತ್ತೆ ಕಣಕ್ಕಿಳಿದು ಕುಮಾರಸ್ವಾಮಿ ಎದುರು ಸೋಲು

2023: ಬಿಜೆಪಿಯಿಂದ ಮತ್ತೆ ಕುಮಾರಸ್ವಾಮಿ ಎದುರು ಸ್ಪರ್ಧಿಸಿ ಸೋಲು.

2024: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.