ಬೆಂಗಳೂರು: 'ನನ್ನ ಪುತ್ರ ನಿಖಿಲ್ ಮೂರು ಬಾರಿ ಚುನಾವಣೆಯಲ್ಲಿ ಸೋತಿರಬಹುದು, ಮನುಷ್ಯನಾಗಿ ಸೋತಿಲ್ಲ. ಅವನ ಮಾನವೀಯತೆ, ಸಹೃದಯತೆ ಗೆದ್ದಿದೆ’ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತ ಹೇಳಿಕೆಯನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಚುನಾವಣಾ ವ್ಯವಸ್ಥೆಯಲ್ಲಿ ಸೋಲು–ಗೆಲುವು ಸಹಜ. ಒಬ್ಬರು ಗೆಲ್ಲಲು ಇನ್ನೊಬ್ಬರು ಸೋಲಲೇಬೇಕಾಗುತ್ತದೆ. ಆದರೆ, ಸೋಲಿಗೆ ಅನೇಕ ಕಾರಣಗಳಿರುತ್ತವೆ. ನಮ್ಮ ಕುಟುಂಬಕ್ಕೆ ಸೋಲು–ಗೆಲುವು ಹೊಸದಲ್ಲ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಸೋತ ಹತಾಶೆಯಲ್ಲಿ ಬೇರೆಯವರನ್ನು ಹೀಗಳೆದಿಲ್ಲ. ನನ್ನ ಮಗನ ನಡವಳಿಕೆಯೂ ಹಾಗೆಯೇ ಇದೆ’ ಎಂದು ಶ್ಲಾಘಿಸಿದ್ದಾರೆ.
‘ನಾನು ಸದಾ ಆ ಭಗವಂತನಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಮಗನ ಮೇಲೆ ಆ ದೈವದ ಕರುಣೆ, ಅನುಗ್ರಹವಿದೆ ಹಾಗೂ ಚನ್ನಪಟ್ಟಣ ಜನತೆಯ ಪ್ರೀತಿ ವಿಶ್ವಾಸವೂ ಸದಾ ಅವನ ಮೇಲಿರುತ್ತದೆ. ಇಂದಲ್ಲ, ನಾಳೆ ಜನಸೇವೆ ಮಾಡುವ ಅವಕಾಶ ಅವನಿಗೆ ಸಿಕ್ಕೇ ಸಿಗುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.