ADVERTISEMENT

Channapatna By Election Result |ದೇವೇಗೌಡರು ನಿವೃತ್ತಿ ಪಡೆಯಲಿ: ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 15:13 IST
Last Updated 23 ನವೆಂಬರ್ 2024, 15:13 IST
<div class="paragraphs"><p>ಸಿ.ಪಿ. ಯೋಗೇಶ್ವರ್, ಕಾಂಗ್ರೆಸ್ ಅಭ್ಯರ್ಥಿ</p></div>

ಸಿ.ಪಿ. ಯೋಗೇಶ್ವರ್, ಕಾಂಗ್ರೆಸ್ ಅಭ್ಯರ್ಥಿ

   

ಬೆಂಗಳೂರು: ಚನ್ನಪಟ್ಟಣದಲ್ಲಿ ನಿರೀಕ್ಷಿತ ಗೆಲುವು ದೊರೆತಿದೆ. ಹಳೆ ಮೈಸೂರು ಭಾಗದ ಜನರು ಡಿ.ಕೆ. ಶಿವಕುಮಾರ್‌ ನಾಯಕತ್ವ ಒಪ್ಪಿಕೊಂಡಿದ್ದಾರೆ. ಒಕ್ಕಲಿಗರ ನಾಯಕತ್ವವನ್ನು ದೇವೇಗೌಡರ ಕುಟುಂಬದಿಂದ ಕಿತ್ತುಕೊಂಡಿದ್ದಾರೆ ಎಂದು ವಿಜೇತ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ತಿಳಿಸಿದರು.

ಗೆಲುವಿನ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಧ್ಯಾಕಾಲದಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದ ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸುವ ಪಣತೊಟ್ಟಿದ್ದರು. ಅವರ ಹೋರಾಟದಲ್ಲಿ ಸಾಮಾಜಿಕ ಕಾಳಜಿ ಇರಲಿಲ್ಲ. ಸ್ವಾರ್ಥವಿತ್ತು. ವಂಶಪಾರಂಪರ್ಯ ಆಡಳಿತ ಮುಂದುವರಿಸುವ ಕೌಟುಂಬಿಕ ಉದ್ದೇಶವಷ್ಟೇ ಕಾಣುತ್ತಿತ್ತು. ಹಾಗಾಗಿ, ಜನರು ತಿರಸ್ಕಾರ ಮಾಡಿದ್ದಾರೆ. ಈಗಲಾದರೂ ರಾಜಕೀಯ ನಿವೃತ್ತಿ ಪಡೆದು, ವಿಶ್ರಾಂತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ, ಕುಮಾರಸ್ವಾಮಿ ಅವರದು ಒಂದೇ ಕಾರ್ಯಸೂಚಿ. ತಮ್ಮ ಮಕ್ಕಳ ಬೆಳವಣಿಗೆಗೆ ಬಿಜೆಪಿ–ಜೆಡಿಎಸ್‌ ಪಕ್ಷಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ಜೆಡಿಎಸ್‌ ಅಸ್ತಿತ್ವಕ್ಕಾಗಿ ಕುಮಾರಸ್ವಾಮಿ, ದೇವೇಗೌಡರು ಮಗ–ಮೊಮ್ಮಗನನ್ನೇ ಪಣಕ್ಕೆ ಇಟ್ಟಿದ್ದರು. ಜೆಡಿಎಸ್‌ ಈಗ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆ ಎಂದರು.

‘ವಿಜಯೇಂದ್ರ, ಯಡಿಯೂರಪ್ಪ ಬೀದಿಗೆ ಬಂದಾಗ ಮರು ಶಕ್ತಿ ತುಂಬಿದ್ದೆವು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಾ.ಮಂಜುನಾಥ್‌ ಅವರನ್ನು ಗೆಲ್ಲಿಸಿದ್ದೆವು. ಈಗ ಅದೇ ಮತಗಳು ಕಾಂಗ್ರೆಸ್‌ ಪಾಲಾಗಿವೆ. ಅಂದು ಸೋತಿದ್ದ ಅಭ್ಯರ್ಥಿ ಡಿ.ಕೆ. ಸುರೇಶ್‌ ಜತೆ ನಿಂತು ಈಗ ಚುನಾವಣೆ ಎದುರಿಸಿದೆ. 30 ಸಾವಿರ ಅಂತರದಿಂದ ಗೆಲ್ಲುವುದಾಗಿ ಮತದಾನದ ದಿನವೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಹೇಳಿದ್ದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.