ADVERTISEMENT

ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ ಸರ್ಕಾರದಿಂದ ನಮ್ಮ ಮೇಲೆ ದಬ್ಬಾಳಿಕೆ– HDK

ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 8:57 IST
Last Updated 26 ಅಕ್ಟೋಬರ್ 2024, 8:57 IST
ಚನ್ನಪಟ್ಟಣ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆಯ ರೋಡ್‌ ಷೋದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಇತರರು ಇದ್ದಾರೆ
ಚನ್ನಪಟ್ಟಣ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆಯ ರೋಡ್‌ ಷೋದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಇತರರು ಇದ್ದಾರೆ   

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, 'ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಕರ್ತರು, ಸಾರ್ವಜನಿಕರು ಸೇರಿದ್ದರು. ಎನ್ ಡಿಎ ಮೈತ್ರಿಕೂಟದ ನಾಯಕರು ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಇದು ಐತಿಹಾಸಿಕ ಸಭೆ ಆಗಿತ್ತು. ಇದು ಕಾಂಗ್ರೆಸ್ ನಾಯಕರ ಕಣ್ಣು ಕುಕ್ಕಿದೆ' ಎಂದರು.

'ಈ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಜನ ಕಾರ್ಯಕ್ರಮಕ್ಕೆ ಬರಬಾರದಾ? ಶುಕ್ರವಾರ ನಾಮಪತ್ರ ಸಲ್ಲಿಕೆಯ ನಂತರ ಒಂದು ನೊಟೀಸ್ ಕೊಟ್ಟಿದ್ದಾರೆ. ಬರುವವರ ಮೇಲೆಲ್ಲಾ ಕೇಸ್ ಹಾಕಿಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ. ಶುಕ್ರವಾರ ನಮ್ಮ ಪಕ್ಷದ ಅಧ್ಯಕ್ಷರಿಗೆ ನೊಟೀಸ್ ಕೊಟ್ಟಿದ್ದಾರೆ. ಇದಕ್ಕೆಲ್ಲಾ ನಾವು ಹೆದರುವ ಪ್ರಶ್ನೆ ಇಲ್ಲ. ಜನರ ಬಳಿ ನಾವು ಮತ ಕೇಳುತ್ತೇವೆ. ಅವರೇ ತೀರ್ಪು ಕೊಡುತ್ತಾರೆ' ಎಂದರು.

ADVERTISEMENT

'ಸರ್ಕಾರ ಈ ಕಾರ್ಯಕ್ರಮಕ್ಕೆ ಬಂದ ವಾಹನಗಳಿಗೆ ನೊಟೀಸ್ ನೀಡಿದೆ. ಸಿಎಂ, ಡಿಸಿಎಂ ಆದಿಯಾಗಿ ಅವರ ಕಡೆಯಿಂದ ಎಲ್ಲಾರೂ ಚನ್ನಪಟ್ಟಣಕ್ಕೆ ಹೋಗಿದ್ದರಲ್ಲವೇ? ಹಾಗಿದ್ದರೆ, ಅವರ ಸಭೆಗಳಿಗೆ ಬಂದ ಜನರಿಗೆ ವಾಹನದ ವ್ಯವಸ್ಥೆ ಮಾಡೇ ಇರಲಿಲ್ಲವೇ' ಎಂದು ಪ್ರಶ್ನಿಸಿದರು.

'ಶನಿವಾರ ನಮ್ಮ ಕಾರ್ಯಕ್ರಮಕ್ಕೆ ಬಂದವರ ವಿಡಿಯೋ ಮಾಡಿಕೊಂಡು, ಅಧಿಕಾರಿಗಳಿಗೆ ಹೇಳಿ ಕೇಸ್ ಹಾಕಿಸಿ ಯಾವ ಚುನಾವಣೆ ನಡೆಸಲು ಹೋಗ್ತಿದ್ದಾರೆ ಇವರು? ನಮ್ಮ ಪಕ್ಷದ ಅಧ್ಯಕ್ಷರಿಗೆ ಇದರ ಬಗ್ಗೆ ಒಂದು ನೊಟೀಸ್ ಕೊಟ್ಟಿದ್ದಾರೆ. ದಬ್ಬಾಳಿಕೆ ಮೂಲಕ ಇವರು ಚುನಾವಣೆ ನಡೆಸಲು ಹೋಗ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡುತ್ತಿದೆ ಸರ್ಕಾರ. ಇದೆಲ್ಲವನ್ನೂ ನಾವು ಮೊದಲೇ ನಿರೀಕ್ಷೆ ಮಾಡಿದ್ದೆವು' ಎಂದರು.

'ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಸೇರಿದಂತೆ ಮೂರೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

'ನಾವು ಮೂರೂ ಕ್ಷೇತ್ರ ಗೆದ್ದಾಗಿದೆ ಎಂದು ಸಿಎಂ ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರ ಭಾವನಾತ್ಮಕ ಮಾತು ಮತ್ತು ಕಣ್ಣೀರು ಜನರಿಗೆ ಬೇಸರವಾಗಿ ಹೋಗಿದೆ ಅಂದಿದ್ದಾರೆ. ಪಾಪ. ಇವರು ಎಂದೂ ಜನರ ಮುಂದೆ ಕಣ್ಣೀರೇ ಹಾಕಿಲ್ಲವೇ? ಹೌದು, ನಾನು ಜನರ ಕಷ್ಟ ನೋಡಿ ಕಣ್ಣೀರು ಹಾಕ್ತಿದ್ದೇನೆ. ಇವರು ಅಧಿಕಾರ, ಹಣದ ದುರ್ಬಳಕೆಯಿಂದ ಗೆದ್ದಾಗಿದೆ ಎಂದು ಬೀಗುತ್ತಿದ್ದಾರೆ. ಇವರಿಗೆ ಚನ್ನಪಟ್ಟಣದಲ್ಲಿ ನಿಲ್ಲಿಸೋಕೆ ಕಾಂಗ್ರೆಸ್ ಪಕ್ಷದಿಂದ ಒಬ್ಬ ಅಭ್ಯರ್ಥಿ ಸಿಗಲಿಲ್ಲ. ಬಿಜೆಪಿಯಿಂದ ಅಭ್ಯರ್ಥಿ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ, ಇಷ್ಟಾದರೂ ಕುತಂತ್ರ ಬೇರೆ ಮಾಡಿದ್ದಾರೆ' ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.