ರಾಮನಗರ: ‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾವು ಗೆದ್ದಿದ್ದ ಕೋಲಾರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಿಲ್ಲವೇ? ಅದೇ ರೀತಿ, ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡುವಂತೆ ನಾವು ಜೆಡಿಎಸ್‌ಗೆ ಒತ್ತಾಯಿಸುತ್ತೇವೆ...’ – ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಗೆದ್ದಿರುವ ಚನ್ನಪಟ್ಟಣವನ್ನು ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಿಟ್ಟು ಕೊಡುತ್ತಾರೆಯೇ? ಎಂಬ ಪ್ರಶ್ನೆಗೆ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ಅವರು ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೀಡಿದ ಪ್ರತಿಕ್ರಿಯೆ ಇದು.
‘ಕೋಲಾರದ ಸಂಸದರಾಗಿದ್ದ ಮುನಿಸ್ವಾಮಿ ಅವರಿಗೆ ಟಿಕೆಟ್ ಕೈ ತಪ್ಪಿದರೂ, ಪಕ್ಷದ ಸೂಚನೆಯಂತೆ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಕೆಲಸ ಮಾಡಿ ಗೆಲುವಿಗೆ ಶ್ರಮಿಸಲಿಲ್ಲವೇ? ಇಲ್ಲಿ ಬಿಜೆಪಿ ಅಥವಾ ಜೆಡಿಎಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರೇ ಅಭ್ಯರ್ಥಿಯಾಗಲಿದ್ದಾರೆ. ನಾವು ಪಕ್ಷ ನೋಡದೆ ಎನ್‌ಡಿಎ ಅಭ್ಯರ್ಥಿ ಎಂದು ಗೆಲುವಿಗಾಗಿ ಕೆಲಸ ಮಾಡುತ್ತೇವೆ’ ಎಂದರು.
‘ಕ್ಷೇತ್ರದ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಗೆಲುವು ಸಾಧಿಸುವುದು ಗೋಡೆ ಮೇಲಿನ ಬರಹದಷ್ಟೇ ಸತ್ಯ. ಸಾಮಾನ್ಯ ಕಾರ್ಯಕರ್ತನಿಗೂ ಇದು ಗೊತ್ತು. ಯೋಗೇಶ್ವರ್ ಹೊರತುಪಡಿಸಿದರೆ ಅಲ್ಲಿ ಗೆಲ್ಲುವ ಸಾಮರ್ಥ್ಯವಿರುವುದು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾತ್ರ. ಟಿಕೆಟ್ ಕುರಿತು ಎರಡೂ ಪಕ್ಷಗಳ ನಾಯಕರು ಸಭೆ ನಡೆಸುತ್ತಿದ್ದು, ಅಂತಿಮವಾಗಿ ಯೋಗೇಶ್ವರ್ ಅವರ ಹೆಸರೇ ಅಂತಿಮವಾಗಲಿದೆ. ಸ್ವತಂತ್ರವಾಗಿ ಅವರು ಕಣಕ್ಕಿಳಿಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಯೋಗೇಶ್ವರ್ ಅವರು ನುರಿತ ರಾಜಕಾರಣಿ. ಪಕ್ಷೇತರವಾಗಿ ಗೆದ್ದು ರಾಜಕೀಯ ಶುರು ಮಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯಿಂದಲೂ ಗೆದ್ದಿದ್ದಾರೆ. ಟಿಕೆಟ್ ಸಿಗದಿದ್ದಾಗ ಸಮಾಜವಾದಿ ಪಕ್ಷದಿಂದ ಟಿಕೆಟ್ ತಂದು ಕೆಂಪು ಟೋಪಿ ಧರಿಸಿ ಚುನಾವಣೆ ಗೆದ್ದಿದ್ದಾರೆ. ಅವರಿಗೆ ಚುನಾವಣೆ ಮಾಡುವುದು ಕರಗತವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.