ಚನ್ನಪಟ್ಟಣ (ರಾಮನಗರ): ರಾಜ್ಯದ ಗಮನ ಸೆಳೆದ ತುರುಸಿನ ಉಪ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ಹಿಂದಿನ ಚುನಾವಣೆಗಳಲ್ಲಿ ಯಾರು ಗೆಲ್ಲಬಹುದೆಂಬ ಅಂದಾಜು ಸಿಗುತ್ತಿತ್ತು. ಆದರೆ, ಈ ಸಲ ಅಂದಾಜಿಗೆ ನಿಲುಕುತ್ತಿಲ್ಲ. ಇಬ್ಬರ ನಡುವೆ ತೀವ್ರ ಪೈಪೋಟಿ ಇದೆ.
ಯಾರೇ ಗೆದ್ದರೂ ಮತಗಳ ಅಂತರ ಕಡಿಮೆ ಇರಲಿದೆ ಎನ್ನುವ ಮಾತು ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ. ಆದರೆ, ಯಾರಲ್ಲೂ ಇಂಥವರೇ ನಿರ್ದಿಷ್ಟವಾಗಿ ಗೆಲ್ಲುತ್ತಾರೆ ಎಂದು ಹೇಳುವ ಆತ್ಮವಿಶ್ವಾಸ ಕಾಣುತ್ತಿಲ್ಲ. ರಾಜಕೀಯ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರೂ ಇದಕ್ಕೆ ಹೊರತಾಗಿಲ್ಲ. ಮತದಾನಕ್ಕೂ ಮುನ್ನ ನಡೆದ ರಾಜಕೀಯ ನಾಯಕರ ಮಾತಿನ ಭರಾಟೆ ಫಲಿತಾಂಶದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರು ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಕುರಿತು ಆಡಿದ ಮಾತು ಕ್ಷೇತ್ರದ ಜಾತಿ ಮತ್ತು ಧರ್ಮಾಧಾರಿತ ಮತಗಳ ಸಮೀಕರಣ ಬದಲಿಸಿತು ಎಂಬ ಚರ್ಚೆಯೂ ನಡೆಯುತ್ತಿದೆ.
ಜಮೀರ್ ಮಾತು ಜೆಡಿಎಸ್–ಬಿಜೆಪಿ ಪಾಳಯಕ್ಕೆ ಕಡೆ ಗಳಿಗೆಯಲ್ಲಿ ವರವಾಗಿ ಪರಿಣಮಿಸಿತು. ಇದರಿಂದ ಒಂದಿಷ್ಟು ಒಕ್ಕಲಿಗ ಮತ್ತು ಹಿಂದೂ ಮತಗಳ ಕ್ರೋಡೀಕರಣ ಆಗಿರುವುದನ್ನು ಅಲ್ಲಗಳೆಯುವಂತಿಲ್ಲ. ಅದೇ ರೀತಿ, ಅಲ್ಪಸಂಖ್ಯಾತರ ಮತಗಳು ‘ಕೈ’ ಬಿಟ್ಟು ಚದುರದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.
ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರಷ್ಟೇ ಅಲ್ಲ, ಜನಸಾಮಾನ್ಯರು ಕೂಡ ಯಾರಿಗೆ ಎಷ್ಟು ಮತ ಬರುಬಹುದು, ಯಾವ ಸಮುದಾಯದ ಮತಗಳು ಯಾವ ಅಭ್ಯರ್ಥಿಗೆ ಎಷ್ಟು ಪ್ರಮಾಣದಲ್ಲಿ ಬಂದಿರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮಾತಿನ ಒಳಮರ್ಮ ಏನು?:
ಚುನಾವಣಾ ಪ್ರಚಾರದ ವೇಳೆ ಜಮೀರ್ ಅಹಮದ್ ಅವರು ಗೌಡರ ಕುಟುಂಬದ ಕುರಿತು ಆಡಿದ ಮಾತು ಹಾಗೂ ಮತದಾನದ ಮಾರನೇಯ ದಿನವೇ ಮೌನ ಮುರಿದ ಯೋಗೇಶ್ವರ್ ಮಾತಿನ ಒಳಮರ್ಮವೇನು ಎಂಬ ಚರ್ಚೆಯೂ ಕ್ಷೇತ್ರದಲ್ಲಿ ಜೋರಾಗಿದೆ.
‘ಜಮೀರ್ ಮಾತಿನ ಬಿಸಿ ಮತದಾನದ ಮೇಲೆ ತಟ್ಟಿದೆ. ಹಾಗಾಗಿಯೇ, ವಾಸ್ತವದ ನೆಲೆಗಟ್ಟಿನಲ್ಲಿ ಯೋಗೇಶ್ವರ್ ಆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ’ ಎಂದು ತಾಲ್ಲೂಕಿನ ಕೆಲ ರಾಜಕೀಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಇನ್ನುಳಿದವರು, ‘ಯೋಗೇಶ್ವರ್ ಹೇಳಿಕೆ ಕುರಿತು ಅಚ್ಚರಿಪಡಬೇಕಿಲ್ಲ. ಹಿಂದಿನ ಚುನಾವಣೆಗಳಲ್ಲೂ ಅವರು ಹೀಗೆಯೇ ಮಾತನಾಡಿದ್ದಾರೆ. ಬೆಟ್ಟಿಂಗ್ ಹಿನ್ನೆಲೆಯಲ್ಲೂ ಈ ರೀತಿ ಹೇಳಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ’ ಎನ್ನುತ್ತಾರೆ ಎದುರಾಳಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು.
‘ಜಾತಿ, ಅಭಿವೃದ್ಧಿ, ಅಭಿಮಾನ, ಹಣ, ಗಿಫ್ಟ್ ಚುನಾವಣೆಯಲ್ಲಿ ಹೆಚ್ಚು ಸುದ್ದಿ ಮಾಡಿವೆ. ಇಷ್ಟೊಂದು ಹಣಾಹಣಿ ಹಾಗೂ ದುಬಾರಿ ಚುನಾವಣೆಯನ್ನು ನಾನೆಂದೂ ನೋಡಿಲ್ಲ’ ಎಂದು ರೈತ ಸಂಘದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಟ್ಟಿಂಗ್ ಭರಾಟೆ
ಕ್ಷೇತ್ರದಲ್ಲಿ ಬೆಟ್ಟಿಂಗ್ ಭರಾಟೆ ಕೂಡ ಜೋರಾಗಿದೆ. ಆರಂಭದಲ್ಲಿ ಸಾವಿರ, ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿದ್ದ ಬೆಟ್ಟಿಂಗ್, ಯೋಗೇಶ್ವರ್ ಗುರುವಾರ ನೀಡಿದ ಹೇಳಿಕೆ ಬಳಿಕ ತೀವ್ರಗೊಂಡಿದೆ. ಆಸ್ತಿ, ವಾಹನಗಳ ಜೊತೆ ಕೋಟಿಗಟ್ಟಲೇ ಹಣ ಪಣಕ್ಕಿಡುವ ಮಟ್ಟಿಗೆ ತಲುಪಿದರೂ ಆಶ್ಚರ್ಯವಿಲ್ಲ ಎನ್ನುತ್ತವೆ ಮೂಲಗಳು.
ಪಕ್ಷದ ತಾಲ್ಲೂಕು ಮತ್ತು ಬೂತ್ ಮಟ್ಟದ ಮುಖಂಡರು ಹಾಗೂ ಆಪ್ತರ ಜತೆ ಸರಣಿ ಸಭೆ ನಡೆಸಿರುವ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಪ್ತರ ಮೂಲಕ ಖಾಸಗಿಯಾಗಿಯೂ ವಾಸ್ತವ ಸ್ಥಿತಿಯನ್ನು ಅರಿಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಯಾವ ಪ್ರದೇಶದಲ್ಲಿ ಯಾರಿಗೆ ಎಷ್ಟು ಮತ ಬಂದಿವೆ. ಅಭ್ಯರ್ಥಿಗಳ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶ ಏನು? ಮತದಾನದ ಹಿಂದಿನ ದಿನ ನಡೆದ ಬೆಳವಣಿಗೆ, ರಾಜಕೀಯ ಮುಖಂಡರ ಹೇಳಿಕೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಜೋರಾದ ವಿಶ್ಲೇಷಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.