ADVERTISEMENT

ಚನ್ನಪಟ್ಟಣ ಉಪಚುನಾವಣೆ | ಬಿಜೆಪಿ ಟಿಕೆಟ್‌ ನಿರೀಕ್ಷೆ: ಸೈನಿಕನ ಆಸೆ ಇನ್ನೂ ಜೀವಂತ!

ಚನ್ನಪಟ್ಟಣ: ನಾಳೆ ನಾಮಪತ್ರ ಸಲ್ಲಿಕೆ: ಬೆಂಬಲಿಗರ ಸಭೆಯಲ್ಲೂ ಗುಟ್ಟು ಬಿಡದ ಯೋಗೇಶ್ವರ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 23:50 IST
Last Updated 22 ಅಕ್ಟೋಬರ್ 2024, 23:50 IST
ಚನ್ನಪಟ್ಟಣ ಕುವೆಂಪು ನಗರದಲ್ಲಿರುವ ತಮ್ಮ ಮನೆಯ ಬಳಿ ಮಂಗಳವಾರ ಜಮಾಯಿಸಿದ್ದ ಬೆಂಬಲಿಗರನ್ನು ಉದ್ದೇಶಿಸಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್ ಮಾತನಾಡಿದರು
ಚನ್ನಪಟ್ಟಣ ಕುವೆಂಪು ನಗರದಲ್ಲಿರುವ ತಮ್ಮ ಮನೆಯ ಬಳಿ ಮಂಗಳವಾರ ಜಮಾಯಿಸಿದ್ದ ಬೆಂಬಲಿಗರನ್ನು ಉದ್ದೇಶಿಸಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್ ಮಾತನಾಡಿದರು   

ಚನ್ನಪಟ್ಟಣ(ರಾಮನಗರ): ಚನ್ನಪಟ್ಟಣ ಉಪ ಚುನಾವಣೆಯ ಮೈತ್ರಿ ಟಿಕೆಟ್ ಹಗ್ಗಜಗ್ಗಾಟ ರೋಚಕ ಘಟ್ಟ ತಲುಪಿದೆ. ಬಿಜೆಪಿ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿರುವ ಸಿ.ಪಿ. ಯೋಗೇಶ್ವರ್‌ ಇನ್ನೂ ಎರಡು ದಿನ ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ.

‘ಗುರುವಾರ(ಅ.24) ನಾಮಪತ್ರ ಸಲ್ಲಿಸುವೆ. ಆದರೆ, ಯಾವ ಪಕ್ಷದಿಂದ ಕಣಕ್ಕಿಳಿಯುತ್ತೇನೆ ಎಂದು ಮಂಗಳವಾರ ಸಂಜೆ ಹೊತ್ತಿಗೆ ತೀರ್ಮಾನಿಸುವೆ’ ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿ ಯೋಗೇಶ್ವರ್ ಬೆಂಬಲಿಗರಿಗೆ ತಿಳಿಸಿದ್ದರು.

ಚನ್ನಪಟ್ಟಣದ ತಮ್ಮ ಮನೆಯಲ್ಲಿ ಮಂಗಳವಾರ ಬೆಂಬಲಿಗರ ಸಭೆ ಕರೆದಿದ್ದ ಯೋಗೇಶ್ವರ್ ಅಲ್ಲಿ ಅಂತಿಮ ನಿರ್ಧಾರ ಪ್ರಕಟಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅವರು ನಿರ್ಧಾರ ಪ್ರಕಟಿಸಲಿಲ್ಲ. ಬಿಜೆಪಿಯಿಂದ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆಯೂ ಗುಟ್ಟು ಬಿಟ್ಟು ಕೊಡಲಿಲ್ಲ.

ADVERTISEMENT

ದೆಹಲಿಯಿಂದ ಕರೆ: ‘ಬೆಂಬಲಿಗರ ಸಭೆ ಕರೆದ ನಮ್ಮ ನಾಯಕರಿಗೆ ಬಿಜೆಪಿಯ ದೆಹಲಿ ನಾಯಕರಿಂದ ಕರೆ ಬಂದಿದೆ. ದುಡುಕಿನ ನಿರ್ಧಾರ ಕೈಗೊಳ್ಳದೆ ಕಾಯುವಂತೆ ಸೂಚಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಅವರೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ, ಅವರು ತಮ್ಮ ನಿರ್ಧಾರ ಪ್ರಕಟಿಸುವುದನ್ನು ಮುಂದೂಡಿದ್ದಾರೆ’ ಎಂದು ಯೋಗೇಶ್ವರ್ ಬೆಂಬಲಿಗರೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಬಿಜೆಪಿಯಿಂದ ಸ್ಪರ್ಧಿಸಲು ಒಪ್ಪಿಗೆ ನೀಡಿದರೆ ನೀಡಲಿ. ಇಲ್ಲದಿದ್ದರೆ ಬೆಂಬಲಿಗರ ಅಭಿಪ್ರಾಯದಂತೆ ಮುಂದಿನ ನಿರ್ಧಾರ ಕೈಗೊಳ್ಳುವೆ’ ಎಂದು ಸಭೆಯ ಬಳಿಕ ಯೋಗೇಶ್ವರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ನಾನು ಮೈತ್ರಿ ಅಭ್ಯರ್ಥಿಯಾಗಲು ಒಪ್ಪಿರುವ ಜೆಡಿಎಸ್ ನಾಯಕರು, ಜೆಡಿಎಸ್‌ನಿಂದಲೇ ಕಣಕ್ಕಿಳಿಯಬೇಕು ಎಂದು ಏಕೆ ಷರತ್ತು ಹಾಕಬೇಕು? ಜೆಡಿಎಸ್‌ನಿಂದ ಸ್ಪರ್ಧಿಸಲು ನನ್ನ ಬೆಂಬಲಿಗರ ವಿರೋಧವಿದೆ. ಮಾತ್ರವಲ್ಲ ಇದರಿಂದ ಪಕ್ಷದೊಳಗೆ ನನ್ನ ಹಿರಿತನಕ್ಕೂ ಧಕ್ಕೆಯಾಗಲಿದೆ. ಹಾಗಾಗಿ, ನಾನು 15 ವರ್ಷಗಳಿಂದ ಇರುವ ಬಿಜೆಪಿಯಿಂದಲೇ ಸ್ಪರ್ಧಿಸಲು ಅವಕಾಶ ನೀಡಲಿ’ ಎಂದು ಮನವಿ ಮಾಡಿದರು.

ಬಿಎಸ್‌ಪಿ ಅಥವಾ ಎಸ್‌ಪಿಯಿಂದ ಕಣಕ್ಕೆ?

ಬಿಜೆಪಿ ಟಿಕೆಟ್‌ ಸಿಗದಿದ್ದರೆ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಅಥವಾ ಸಮಾಜವಾದಿ ಪಕ್ಷದಿಂದ(ಎಸ್‌ಪಿ) ಸ್ಪರ್ಧಿಸಲು ಯೋಗೇಶ್ವರ್‌ ಯೋಚಿಸುತ್ತಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ‘2013ರಲ್ಲೂ ಅವರಿಗೆ ಟಿಕೆಟ್ ಸಿಗದಿದ್ದಾಗ ಕೊನೆಯ ಕ್ಷಣದಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ಜಯ ಸಾಧಿಸಿದ್ದರು. ಈ ಬಾರಿಯೂ ರಾಷ್ಟ್ರೀಯ ಪಕ್ಷವೊಂದರಿಂದ ಸ್ಪರ್ಧಿಸಿ ಗೆದ್ದರೆ 2028ರ ಚುನಾವಣೆ ಹೊತ್ತಿಗೆ ಮರಳಿ ಬಿಜೆಪಿಗೆ ಬಂದು ಸ್ಪರ್ಧಿಸಿ ಕ್ಷೇತ್ರ ಉಳಿಸಿಕೊಳ್ಳುವ ಆಲೋಚನೆ ಅವರದ್ದು’ ಎಂದು ಅವರ ಬೆಂಬಲಿಗರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.