ADVERTISEMENT

ಚನ್ನ‍ಪಟ್ಟಣ ಉಪಚುನಾವಣೆ | ಜೆಡಿಎಸ್‌–ಯೋಗೇಶ್ವರ್‌ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 0:30 IST
Last Updated 22 ಅಕ್ಟೋಬರ್ 2024, 0:30 IST
ಸಿ.ಪಿ.ಯೋಗೇಶ್ವರ್
ಸಿ.ಪಿ.ಯೋಗೇಶ್ವರ್   

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್‌ಗಾಗಿ ಜೆಡಿಎಸ್‌ ನಾಯಕರು ಮತ್ತು ಸಿ.ಪಿ. ಯೋಗೇಶ್ವರ್‌ ಮಧ್ಯೆ ಜಟಾಪಟಿ ತಾರಕಕ್ಕೇರಿದೆ. ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂಬ ಹಟಕ್ಕೆ ಬಿದ್ದಿರುವ ಯೋಗೇಶ್ವರ್‌, ಪರಿಷತ್‌ನ ಬಿಜೆಪಿ ಸದಸ್ಯ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗಷ್ಟೇ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ಮೌನ ತಾಳಿದ್ದಾರೆ. ಚನ್ನಪಟ್ಟಣದ ಅಭ್ಯರ್ಥಿಯನ್ನು ತಾವೇ ನಿರ್ಧರಿಸುವುದಾಗಿ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಬೆಳವಣಿಗೆಯು ಬಿಕ್ಕಟ್ಟು ಉತ್ತುಂಗಕ್ಕೆ ತಲುಪಲು ಕಾರಣವಾಗಿದೆ.

ಯೋಗೇಶ್ವರ್ ಅವರನ್ನೇ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆಯೂ ಮೈತ್ರಿಕೂಟದಲ್ಲಿ ಚರ್ಚೆ ಬಿರುಸಾಗಿತ್ತು. ‘ಯೋಗೇಶ್ವರ್‌ ಅವರು ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ ನಾಯಕರನ್ನು ಆಗಾಗ ಭೇಟಿಯಾಗುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಅವರು ಆರೋಪಿಸಿದ ಬೆನ್ನಲ್ಲೇ ವಾಕ್ಸಮರ ಜೋರಾಗಿದೆ.

ADVERTISEMENT

‘ಕುಟುಂಬಕ್ಕೇ ಮನ್ನಣೆ’: ಸೋಮವಾರ ಹುಬ್ಬಳ್ಳಿಗೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಯೋಗೇಶ್ವರ್, ‘ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ದಿನದಿಂದಲೂ ಮಗ ನಿಖಿಲ್‌ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಬೇಕು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅದಕ್ಕಾಗಿಯೇ ಪ್ರಯತ್ನ ಮಾಡುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಆ ಭಾವನೆ ಇರುವಾಗ ನಾನು ಟಿಕೆಟ್ ಕಿತ್ತುಕೊಳ್ಳಲು ಆಗುತ್ತದಾ’ ಎಂದು ಪ್ರಶ್ನಿಸಿದರು.

‘ನಾನು ಕಾಂಗ್ರೆಸ್‌ನ ಯಾವುದೇ ನಾಯಕರನ್ನೂ ಭೇಟಿ ಮಾಡಿಲ್ಲ. ಕುಮಾರಸ್ವಾಮಿ ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧಿಸುವಂತೆ ಅವರು ಖಚಿತವಾಗಿ ಹೇಳಿಲ್ಲ. ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧಿಸುವುದು ಬೇಡ ಎಂದು ನಮ್ಮ ತಾಲ್ಲೂಕಿನ ಜನರೂ ಹೇಳುತ್ತಿದ್ದಾರೆ. ಬಿಜೆಪಿಯಿಂದಲೇ ಸ್ಪರ್ಧಿಸಲು ಬಯಸಿದ್ದೇನೆ. ಆದರೆ, ನನಗೆ ಬೆಂಬಲ ಸಿಗುತ್ತಿಲ್ಲ’ ಎಂದರು.

ದೆಹಲಿಯತ್ತ ಬಿಜೆಪಿ ನಾಯಕರು: ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ಗಾಗಿ ಜಟಾಪಟಿ ಜೋರಾಗುತ್ತಿದ್ದಂತೆಯೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ರಾಜ್ಯ ಘಟಕದ ಕೆಲವು ಪದಾಧಿಕಾರಿಗಳು ದೆಹಲಿಗೆ ತೆರಳಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಕೂಡ ರಾಷ್ಟ್ರ ರಾಜಧಾನಿಗೆ ಹೋಗಿದ್ದಾರೆ.

‘ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ಕುಮಾರಸ್ವಾಮಿಯವರ ನಿರ್ಧಾರಕ್ಕೆ ಬಿಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದರು. ಆ ಪ್ರಕಾರವೇ ಎರಡು ಕ್ಷೇತ್ರಗಳಿಗೆ ಮಾತ್ರ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಯೋಗೇಶ್ವರ್ ಅವರನ್ನು ವರಿಷ್ಠರ ಮೂಲಕ ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ತೀರ್ಮಾನವೇ ಈ ವಿಚಾರದಲ್ಲಿ ಮುಖ್ಯವಾಗುತ್ತದೆ
ಆರ್. ಅಶೋಕ ವಿರೋಧ ಪಕ್ಷದ ನಾಯಕ
ನಾನು ಸಿ.ಪಿ. ಯೋಗೇಶ್ವರ್ ಅವರನ್ನು ಭೇಟಿ ಮಾಡಿಲ್ಲ. ಮಾತೂ ಆಡಿಲ್ಲ. ಬೇರೆ ಪಕ್ಷದವರನ್ನು ಸಂಪರ್ಕಿಸುವ ಅಗತ್ಯ ಸದ್ಯಕ್ಕಿಲ್ಲ ಎಂದು ನಮ್ಮ ಪಕ್ಷದವರಿಗೂ ಹೇಳಿದ್ದೇನೆ
ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷ
ಬಿಜೆಪಿ ಜತೆಗಿನ ಮೈತ್ರಿಗೆ ಅಗೌರವ ತೋರಬಾರದು ಎಂದು ಸಹಿಸಿಕೊಂಡಿದ್ದೇವೆ. ಮೈತ್ರಿ ಚೌಕಟ್ಟಿನ ಒಳಗೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ
ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ

‘ಚನ್ನಪಟ್ಟಣದಿಂದ ಸ್ಪರ್ಧೆ ಖಚಿತ’

ಹುಬ್ಬಳ್ಳಿ: ‘ಚನ್ನಪಟ್ಟಣ ಉಪ ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಬಿಜೆಪಿ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅನುಕೂಲವಾಗಲೆಂದು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಯೋಗೇಶ್ವರ್ ಹೇಳಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಇಲ್ಲಿನ ನಿವಾಸಕ್ಕೆ ಸೋಮವಾರ ಸಾಯಂಕಾಲ ಬಂದ ಅವರು ರಾಜೀನಾಮೆ ಸಲ್ಲಿಸಿದರು. ಅದನ್ನು ಅಂಗೀಕರಿಸಿರುವುದಾಗಿ ಸಭಾಪತಿ ಪ್ರಕಟಿಸಿದರು.  ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯೋಗೇಶ್ವರ್ ‘ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಬಗ್ಗೆ ಈ ಕ್ಷಣದವರೆಗೆ ನಿರ್ಧರಿಸಿಲ್ಲ. ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ. ನಾಳೆ ನಮ್ಮ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನಾನಿನ್ನೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ’ ಎಂದು ತಿಳಿಸಿದರು.

ಕಾರ್ಯಕರ್ತರತ್ತ ಜೆಡಿಎಸ್‌ ಚಿತ್ತ

ಬೆಂಗಳೂರು: ವಿಧಾನಪರಿಷತ್‌ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ ಹಠಾತ್‌ ಬೆಳವಣಿಗೆ ನಂತರ ಸ್ಥಳೀಯ ಕಾರ್ಯಕರ್ತರನ್ನು ಕಣಕ್ಕೆ ಇಳಿಸಲು ಜೆಡಿಎಸ್‌ ನಾಯಕರು ಚಿಂತನೆ ನಡೆಸಿದ್ದಾರೆ. ಪುತ್ರ ನಿಖಿಲ್‌ ಕುಮಾರಸ್ವಾಮಿ ಜೊತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿಯಾದ ಕುಮಾರಸ್ವಾಮಿ ಅವರು ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ‘ಯೋಗೇಶ್ವರ್‌ ಕಾಂಗ್ರೆಸ್‌ ಸೇರುತ್ತಾರೋ ಅಥವಾ ಪಕ್ಷೇತರವಾಗಿ ಸ್ಪರ್ಧಿಸುತ್ತಾರೋ ಎನ್ನುವುದನ್ನು ನೋಡಿಕೊಂಡು ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗುವುದು. ಬುಧವಾರ ಚನ್ನಪಟ್ಟಣದ ಮುಖಂಡರು ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ ಅಭಿಪ್ರಾಯ ಆಲಿಸಲು ಸೂಚಿಸಿದ್ದೇನೆ. ಸಭೆಯ ನಂತರ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಸಂಜೆಯೇ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗುವುದು’ ಎಂದು ಕುಮಾರಸ್ವಾಮಿ ಅವರು ದೇವೇಗೌಡರಿಗೆ ವಿವರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.