ADVERTISEMENT

'ಶಕ್ತಿ' ಮರುಪರಿಶೀಲನೆ ನಾಟಕ, 5 ಗ್ಯಾರಂಟಿ ನಿಲ್ಲಿಸಲು ಮೊದಲ ಹೆಜ್ಜೆ: ಎಚ್‌ಡಿಕೆ

‘ಶಕ್ತಿ ಯೋಜನೆ’ ನಿಲ್ಲಿಸಿ ಎಂದು ಮಹಿಳೆಯರು ಡಿಕೆಶಿಗೆ ಕನಸಲ್ಲಿ ಬಂದು ಕೇಳಿದ್ದಾರೆಯೇ?

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 12:19 IST
Last Updated 31 ಅಕ್ಟೋಬರ್ 2024, 12:19 IST
<div class="paragraphs"><p>ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಎತ್ತಿನ ಬಂಡಿ ಏರಿ ಪ್ರಚಾರ ನಡೆಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ. ಬಿಜೆಪಿಯ ಮಾಜಿ ಸಚಿವ ಬಿ.ಸಿ. ಪಾಟೀಲ ಇದ್ದಾರೆ</p></div>

ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಎತ್ತಿನ ಬಂಡಿ ಏರಿ ಪ್ರಚಾರ ನಡೆಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ. ಬಿಜೆಪಿಯ ಮಾಜಿ ಸಚಿವ ಬಿ.ಸಿ. ಪಾಟೀಲ ಇದ್ದಾರೆ

   

ಚನ್ನಪಟ್ಟಣ (ರಾಮನಗರ): ‘ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯನ್ನು ಮರುಪರಿಶೀಲನೆ ಮಾಡುವ ಕುರಿತು ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ, ಯೋಜನೆಯನ್ನು ನಿಲ್ಲಿಸಿ ಎಂದು ಮಹಿಳೆಯರು ಕನಸಲ್ಲಿ ಬಂದು ಕೇಳಿದ್ದಾರೆಯೇ? ಅಥವಾ ದೇವರು ಬಂದು ಹೇಳಿದ್ದಾರೆಯೇ?’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಐದು ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ನಿಲ್ಲಿಸಲು ಇದು ಮೊದಲ ಹೆಜ್ಜೆ ಅಷ್ಟೇ. ಇನ್ನು ಕೆಲವೇ ದಿನಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ ಕಾರ್ಯಕ್ರಮಗಳನ್ನು ನಿಲ್ಲಿಸಲಿದ್ದಾರೆ. ಅದಕ್ಕೆ ಇವರು ಮರು ಪರಿಶೀಲನೆ ಎಂಬ ಪೀಠಿಕೆ ಹಾಕಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಟ್ವೀಟ್ ಮೂಲಕ ಮಹಿಳೆಯರು ಶಕ್ತಿ ಯೋಜನೆಯನ್ನು ನಿಲ್ಲಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಯಾರು ಟ್ವೀಟ್ ಮಾಡಿದ್ದಾರೆ? ಅಥವಾ ಮಹಿಳೆಯರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ ಎಂದು ಇವರಿಗೆ ಹೊಸ ಜ್ಞಾನೋದಯ ಆಗಿದೆಯಾ? ಕೇವಲ ಒಂದೂವರೆ ವರ್ಷದಲ್ಲಿ ಮಹಿಳೆಯರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆಯೇ?’ ಎಂದು ಪ್ರಶ್ನಿಸಿದರು.

‘ಶಕ್ತಿ ಯೋಜನೆಯ ಮರು ಪರಿಶೀಲನೆಯ ನಾಟಕ ಗ್ಯಾರಂಟಿಗಳನ್ನು ಒಂದೊಂದಾಗಿಯೇ ತೆಗೆಯಲು ಮೊದಲ ಹಂತದ ಪ್ರಕ್ರಿಯೆಯೇ ಈ ಹೇಳಿಕೆ ಎಂದು ಭಾವಿಸಬೇಕಾಗುತ್ತದೆ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿಗಳನ್ನೇ ಪ್ರಮುಖವಾಗಿ ಒತ್ತಿ ಹೇಳುತ್ತಿದ್ದರು. ನುಡಿದಂತೆ ನಡೆದಿದ್ದೇವೆ ಎಂದು ಜನರ ಬ್ರೈನ್ ವಾಷ್ ಮಾಡುತ್ತಿದ್ದರು. ಇದರಿಂದ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ತೆರಿಗೆ ಅಧಿಕಾರಿಗಳ ಸಭೆ ಮಾಡಿ ಇನ್ನೂ ಹೆಚ್ಚುವರಿಯಾಗಿ ₹10,000 ಕೋಟಿ ವಸೂಲಿ ಮಾಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅಂದರೆ, ಇನ್ನಷ್ಟು ಸುಲಿಗೆ ಮಾಡಿ ಅಂತ ಅರ್ಥ ಅಲ್ಲವೇ? ಇದು ಯಾವ ಪುರುಷಾರ್ಥಕ್ಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ಯಾರಂಟಿ ಹೆಸರು ಹೇಳಿ ಜನರಿಗೆ ಹೊರೆ ಹೊರೆಸಿ, ಅವರ ಹಣವನ್ನೇ ಕಿತ್ತು ಅವರಿಗೆ ಚೂರುಪಾರು ಹಂಚುವ ಗ್ಯಾರಂಟಿಗಳಿಗೆ ಅರ್ಥ ಇದೆಯಾ? ಚುನಾವಣೆ ಗೆಲ್ಲುವ ದುರಾಸೆಯಿಂದ ಇಂತಹ ಅವಾಸ್ತವಿಕ ಭರವಸೆಗಳನ್ನು ಕೊಟ್ಟು ರಾಜ್ಯವನ್ನು ಹಾಳು ಮಾಡಿದ್ದಾರೆ. ಜನರನ್ನು ರಣಹದ್ದುಗಳ ರೀತಿಯಲ್ಲಿ ಸರ್ಕಾರ ಕಿತ್ತು ತಿನ್ನುತ್ತಿದೆ’ ಎಂದು ದೂರಿದರು.

‘ಗ್ಯಾರಂಟಿಗಳಿಂದ ಬಂಡವಾಳ ಸಂಗ್ರಹವಾಗದೆ ಕೇವಲ ಖರ್ಚಾಗುತ್ತಿದೆ. ನಾನು ಗ್ಯಾರಂಟಿ ಕೊಡುವುದನ್ನು ವಿರೋಧಿಸುತ್ತಿಲ್ಲ. ಆದರೆ ಗ್ಯಾರಂಟಿ ಹೆಸರಲ್ಲಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಬೇಡಿ. ಮುಂದಿನ ಅಧಿಕಾರ ನಡೆಸುವ ಪೀಳಿಗೆಯ ಭವಿಷ್ಯ ಹಾಳು ಮಾಡಬೇಡಿ. ಅನ್ನಭಾಗ್ಯಕ್ಕೂ ಷರತ್ತುಗಳನ್ನು ವಿಧಿಸಿದ್ದಾರೆ. ಗೃಹಲಕ್ಷ್ಮಿಗೂ ಷರತ್ತುಗಳನ್ನು ಹಾಕಿದ್ದಾರೆ. ಅಕ್ಕಿ ಕೊಡುವುದನ್ನು ಕಡಿತಗೊಳಿಸಿದ್ದಾರೆ’ ಎಂದು ಆರೋಪಿಸಿದರು.

‘ನಮಗೆ ಗ್ಯಾರಂಟಿ ಬಗ್ಗೆ ಯಾವುದೇ ಹೊಟ್ಟೆ ಉರಿ ಇಲ್ಲ. ಗ್ಯಾರಂಟಿ ಬೇಕಾದರೆ ಡಬಲ್ ಮಾಡಿಕೊಳ್ಳಿ. ಆದರೆ ರಾಜ್ಯವನ್ನು ದೀವಾಳಿ ಮಾಡಬೇಡಿ. ಸರ್ಕಾರದ ಅಭಿವೃದ್ಧಿ ಶೂನ್ಯ ಆಗಿದೆ. ಬೇರೆ ದೇಶಗಳಲ್ಲಿ ಉಂಟಾಗಿರುವ ಆರ್ಥಿಕ ಅರಾಜಕತೆ ನಮ್ಮ ರಾಜ್ಯಕ್ಕೆ ಬರಬಾರದು ಎಂಬುದಷ್ಟೆ ನನ್ನ ಕಳಕಳಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.