ಚನ್ನಪಟ್ಟಣ (ರಾಮನಗರ): ‘ಸತತ ಎರಡು ಚುನಾವಣೆಗಳಲ್ಲಿ ಸೋತಿರುವ ನಾನು, ಏನು ತಪ್ಪು ಮಾಡಿದ್ದೇನೆಂದು ಗೊತ್ತಾಗುತ್ತಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗನಾಗಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟನೋ ಗೊತ್ತಿಲ್ಲ’ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದರು.
ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪ್ರಚಾರ ಸಭೆಯಲ್ಲಿ ಗುರುವಾರ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಾ ಭಾವುಕರಾದರು. ಆಗ ಕಾರ್ಯಕರ್ತರು, ‘ಕಣ್ಣೀರು ಹಾಕಬೇಡಿ. ನಿಮ್ಮನ್ನು ಗೆಲ್ಲಿಸುತ್ತೇವೆ. ಯಾವುದೇ ಕಾರಣಕ್ಕೂ ನೀವು ಸೋಲುವುದಿಲ್ಲ. ನಿಮ್ಮ ಗೆಲುವು ಖಚಿತ’ ಎಂದು ಕೂಗಿ ಭರವಸೆ ನೀಡಿದರು.
ಕಣ್ಣೀರು ಒರೆಸಿಕೊಳ್ಳುತ್ತಾ ಮಾತು ಮುಂದುವರಿಸಿದ ನಿಖಿಲ್, ‘ಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಬಾರದು ಅಂದುಕೊಂಡಿದ್ದೆ. ಆದರೆ, ನನ್ನಲ್ಲೂ ಸಾಕಷ್ಟು ನೋವುಗಳಿವೆ. ಎಷ್ಟೇ ಪ್ರಯತ್ನಿಸಿದರೂ ತಡೆದುಕೊಳ್ಳಲು ಆಗುತ್ತಿಲ್ಲ. ಎರಡು ಚುನಾವಣೆಯಲ್ಲೂ ಪೆಟ್ಟು ತಿಂದಿದ್ದೇನೆ. ಜನ ನನ್ನ ಪರವಾಗಿ ಮತ ಹಾಕಿದರೂ, ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿದ್ದೇನೆ. ಬಹಳ ನೋವಿನಲ್ಲಿರುವ ನಾನು, ಇವತ್ತು ಪಕ್ಷದ ಕಾರ್ಯಕರ್ತರಿಗೆ ಬೆಲೆ ಕೊಡಬೇಕೆಂದು ಈ ಚುನಾವಣೆಯಲ್ಲಿ ನಿಂತಿದ್ದೇನೆ. ದಯವಿಟ್ಟು ಈ ಭಾರಿ ಈ ಯುವಕನನ್ನು ಗೆಲ್ಲಿಸಿ’ ಎಂದು ಕೈ ಮುಗಿದು ಮನವಿ ಮಾಡಿದರು.
‘ಹಿಂದೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಾದ ಸೋಲಿಗೆ ಇಲ್ಲಿ ಗೆಲುವಿನ ಉತ್ತರ ಕೊಡಬೇಕು ಎಂಬುದು ಕಾರ್ಯಕರ್ತರ ಭಾವನೆಯಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಏನಾಗಿತ್ತು ಅಂತ ಎಲ್ಲರಿಗೂ ಗೊತ್ತು. ಆಗ ನಾನು ದೇವೇಗೌಡರಿಗೆ ಸಾಹೇಬರಿಗೆ ಮನವಿ ಮಾಡಿದ್ದೆ’ ಎಂದರು.
‘ಪ್ರಾದೇಶಿಕ ಪಕ್ಷ ಕಟ್ಟುವುದೇ ಕಷ್ಟ. ಹಾಗಿರುವಾಗ ರೈತರ ಪರ ಕಾಳಜಿಯೊಂದಿಗೆ ದೇವೇಗೌಡರು ಪಕ್ಷ ಕಟ್ಟಿದ್ದಾರೆ. ನಂತರ ಕುಮಾರಣ್ಣ ಅವರು ಅಧಿಕಾರ ಇರಲಿ, ಇಲ್ಲದಿರಲಿ ರೈತರ ಪರವಾಗಿ ಯಾವಾಗಲೂ ನಿಂತಿದ್ದಾರೆ. ರೈತರ ಸಾಲ ಮನ್ನಾ ಜೊತೆಗೆ, ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ’ ಎಂದು ತಿಳಿಸಿದರು.
‘ಪಕ್ಷದ ಸಂಘಟನೆ ದೃಷ್ಟಿಯಿಂದ ಕಳೆದ ಲೋಕಸಭೆ ಚುನಾವಣೆ ಬಳಿಕ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಪಕ್ಷದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿಬೇಕೆಂಬು ನನ್ನ ಅಭಿಲಾಷೆ. ಪ್ರಾದೇಶಿಕ ಪಕ್ಷ ಕಟ್ಟುವುದು ಮತ್ತು ಉಳಿಸಿಕೊಳ್ಳುವುದು ಕಷ್ಟ ಇದೆ. ನಿಮ್ಮೆಲ್ಲರ ಆಶೀರ್ವಾದದಿಂದ ಈ ಪಕ್ಷ ರಾಜ್ಯದಲ್ಲಿ ಉಳಿದಿದೆ’ ಎಂದರು.
‘ರಾಜ್ಯದಲ್ಲಿ ಮೂರು ಕಡೆ ಉಪ ಚುನಾವಣೆ ನಡೆಯುತ್ತಿದ್ದರೂ, ಚನ್ನಪಟ್ಟಣ ಕ್ಷೇತ್ರದ್ದು ಅತ್ಯಂತ ಮಹತ್ವ ಪಡೆದುಕೊಂಡಿದೆ. ಕುಮಾರಣ್ಣನವರು ಸ್ಪರ್ಧಿಸಿದ್ದ ಕ್ಷೇತ್ರವಾಗಿರುವುದೇ ಅದಕ್ಕೆ ಕಾರಣ. ನಾನು ಪ್ರತಿ ಹಳ್ಳಿಗೂ ಭೇಟಿ ನೀಡುತಿದ್ದೇನೆ. ದಯಮಾಡಿ ನಿಮ್ಮೆಲ್ಲರ ಸಹಕಾರ ಮತ್ತು ವಿಶ್ವಾಸ ನನ್ನ ಮೇಲಿರಲಿ. ದೇವೇಗೌಡರು ಮತ್ತು ಕುಮಾರಣ್ಣನ ಕಾಲದಲ್ಲಿ ಚನ್ನಪಟ್ಟಣದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.