ADVERTISEMENT

Channapatna Bypoll | ರಣ ಕಣವಾದ ಚನ್ನಪಟ್ಟಣ, ಮೈತ್ರಿ ಜಟಾಪಟಿ

ಕಾಯುವ ತಂತ್ರದಲ್ಲಿ ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:30 IST
Last Updated 23 ಅಕ್ಟೋಬರ್ 2024, 0:30 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

– ‍ಪ್ರಜಾವಾಣಿ ಚಿತ್ರ

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಜೆಡಿಎಸ್–ಬಿಜೆಪಿ ಮಧ್ಯೆ ತೀವ್ರ ಪೈಪೋಟಿಗೆ ಕಾರಣ ವಾಗಿದ್ದು, ಅಭ್ಯರ್ಥಿ ಆಯ್ಕೆ ವಿಷಯ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಲೇ ಇದೆ.

ADVERTISEMENT

ವಿಧಾನಪರಿಷತ್ತಿನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ಪರ್ಧೆಗೆ ಅಣಿಯಾಗಿರುವ ಸಿ.ಪಿ.ಯೋಗೇಶ್ವರ್ ಅವರನ್ನು ಬಿಜೆಪಿಯಿಂದಲೇ ಕಣಕ್ಕೆ ಇಳಿಸಬೇಕು ಎಂದು ಬಿಜೆಪಿಯ ರಾಜ್ಯ ನಾಯಕರು ಪಟ್ಟು ಹಿಡಿದಿದ್ದಾರೆ. ಆರಂಭದಲ್ಲಿ ತಮ್ಮ ಪಕ್ಷದಿಂದ ಕಣಕ್ಕಿಳಿಸಲು ಜೆಡಿಎಸ್‌ ನಾಯಕರು ಒಲವು ತೋರಿದ್ದರು. ಆದರೆ ಯೋಗೇಶ್ವರ್ ಅವರು ಆಸಕ್ತಿ ತೋರಲಿಲ್ಲ. ಇದು ಜೆಡಿಎಸ್‌ ನಾಯಕರಿಗೆ ಮುಜುಗರ ಉಂಟು ಮಾಡಿತು. 

ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಮೈತ್ರಿಕೂಟದ ನಡುವೆ ಒಮ್ಮತ ಮೂಡದ ಕಾರಣ ಮಂಗಳವಾರವೂ ಪರಿಸ್ಥಿತಿ ಕಗ್ಗಂಟಾಗಿಯೇ ಉಳಿಯಿತು. ದೆಹಲಿಗೆ ತೆರಳದೇ ಬೆಂಗಳೂರಿನಲ್ಲಿಯೇ ಉಳಿದ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಚನ್ನಪಟ್ಟಣ ಕ್ಷೇತ್ರದ ಪ್ರಮುಖರ ಸಭೆ ನಡೆಸಿದರು.

ಅಲ್ಲಿ, ಬಿಜೆಪಿಯ ರಾಜ್ಯ ನಾಯಕರ ವಿರುದ್ಧ ತಮ್ಮ ಅಸಹನೆಯನ್ನು ಗಟ್ಟಿ ಕಂಠದಲ್ಲಿ ಹೊರಹಾಕಿದರು.  

‘ಯೋಗೇಶ್ವರ್ ಅವರಿಗೆ ಪಕ್ಷದಿಂದ ಟಿಕೆಟ್‌ ಕೊಡಬಾರದು. ಅವರು ಅಧಿಕಾರದಲ್ಲಿ ಇದ್ದಾಗ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಿದ್ದರು. ಕ್ಷೇತ್ರದಲ್ಲಿ ಪಕ್ಷ ಮತ್ತು ಕಾರ್ಯಕರ್ತರ ಪಡೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕಾದರೆ ಕಾರ್ಯರೊಬ್ಬರಿಗೆ ಟಿಕೆಟ್‌ ಕೊಟ್ಟು ಕಣಕ್ಕೆ ಇಳಿಸಿ. ಇಲ್ಲವಾದರೆ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ’ ಎಂಬ ಒಕ್ಕೊರಲ ಅಭಿಪ್ರಾಯ ಜೆಡಿಎಸ್ ಸಭೆಯಲ್ಲಿ ಮೂಡಿಬಂತು. 

ಈ ಬೆಳವಣಿಗೆಯ ಬೆನ್ನಲ್ಲೇ, ಪಕ್ಷದ ಸ್ಥಳೀಯ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡಿ ಕಣಕ್ಕಿಳಿಸುವ
ಕುರಿತು ಕುಮಾರಸ್ವಾಮಿ ಸುಳಿವು ನೀಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಯೋಗೇಶ್ವರ್, ಅಭಿಪ್ರಾಯ ಸಂಗ್ರಹಿಸಿದರು. ‘ನಾನು ಸ್ಪರ್ಧಿಸುವುದು ಖಚಿತ. ಯಾವ ಚಿಹ್ನೆಯಿಂದ ಎಂಬುದನ್ನು ಆದಷ್ಟು ಶೀಘ್ರವೇ ಪ್ರಕಟಿಸುತ್ತೇನೆ’ ಹೇಳಿರುವ ಯೋಗೇಶ್ವರ್ ಅವರು ಎಲ್ಲ ಅವಕಾಶಗಳನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ. ಈ ಮಧ್ಯೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಬಿ ಫಾರಂ ಪಡೆದಿಟ್ಟುಕೊಂಡಿದ್ದಾರೆ.

ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದೇ ಇದ್ದರೆ ಬಿಎಸ್‌ಪಿಯಿಂದ ಸ್ಪರ್ಧಿಸುವ ಸಾಧ್ಯೆಯೂ ಇದೆ ಎನ್ನಲಾಗಿದೆ.

‘ಯೋಗೇಶ್ವರ್ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಗುತ್ತದೆ. ಇದಕ್ಕೆ ಜೆಡಿಎಸ್‌ ಕೂಡ ಒಪ್ಪಿಕೊಂಡಿದೆ. ದೆಹಲಿಯಿಂದಲೇ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ’ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.

ಸಂಡೂರಿನಿಂದ ಅನ್ನಪೂರ್ಣ ಕಣಕ್ಕೆ

ಉಪ ಚುನಾವಣೆ ನಡೆಯಲಿರುವ ಸಂಡೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ
ಇ. ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ. ಆದರೆ, ಚನ್ನಪಟ್ಟಣ ಮತ್ತು ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರಿಸಿದೆ.

ಅನ್ನಪೂರ್ಣ ಅವರ ಹೆಸರನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾವಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗಲಿದೆ’ ಎಂದಿದ್ದಾರೆ.

ಈ ಮಧ್ಯೆ, ಅಭ್ಯರ್ಥಿ ಆಯ್ಕೆ ಅಂತಿಮ ಗೊಳಿಸುವ ಕುರಿತು ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಚರ್ಚೆ ನಡೆಸಿದ್ದಾರೆ.

‘ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮವಾಗಿದ್ದು, ಶೀಘ್ರದಲ್ಲೇ ಪ್ರಕಟಿಸುತ್ತೇವೆ. ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ ಖರ್ಗೆ ಅವರಿಂದ ಅನುಮತಿ ಪಡೆದು ನಾನು ಬಿ ಫಾರಂ ಕೊಡುತ್ತೇನೆ. ಚನ್ನಪಟ್ಟಣದಲ್ಲಿ‌ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ’ ಎಂದು ಡಿ.ಕೆ. ಶಿವಕುಮಾರ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಇನ್ನೂ ಎಲ್ಲಿಯವರೆಗೆ ಬಗ್ಗಲಿ’

‘ಮೈತ್ರಿ ಧರ್ಮ ಪಾಲನೆಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಚನ್ನಪಟ್ಟಣ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ. ನನ್ನ ತಾಳ್ಮೆಗೂ ಮಿತಿ ಇದೆ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಚನ್ನಪಟ್ಟಣ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಬಗ್ಗಿರುವುದು ಅಧಿಕಾರಕ್ಕಾಗಿ ಅಲ್ಲ, ಈ ದೇಶದಲ್ಲಿ ಕಾಂಗ್ರೆಸ್‌ ತೊಲಗಿಸಬೇಕು ಎನ್ನುವ ಪ್ರಧಾನಿ ಮೋದಿ ಅವರ ಸಂಕಲ್ಪಕ್ಕಾಗಿ. ಅವರು ದೇವೇಗೌಡರಿಗೆ ಕೊಡುವ ಗೌರವಕ್ಕಾಗಿ ಬಗ್ಗಿದ್ದೇನೆ. ಕೆಲವರ ಸ್ವಾರ್ಥಕ್ಕಾಗಿ ಗೃಹ ಸಚಿವ ಅಮಿತ್ ಶಾ, ಅಧ್ಯಕ್ಷ ಜೆ.ಪಿ. ನಡ್ಡಾ ಅವರಂತಹ ನಾಯಕರ ಜತೆ ಸಂಬಂಧ ಕಡಿದುಕೊಳ್ಳಬೇಕಾ’ ಎಂದು ಪ್ರಶ್ನಿಸಿದರು.

‘ಸಿ.ಪಿ. ಯೇಗೇಶ್ವರ್‌ ಅವರಿಗೆ ಜೆಡಿಎಸ್‌ನಿಂದಲೇ ಟಿಕೆಟ್‌ ಕೊಡಿ ಎಂದು ಅಮಿತ್‌ ಶಾ, ನಡ್ಡಾ, ಪ್ರಲ್ಹಾದ್‌ ಜೋಶಿ ಸೂಚಿಸಿದ್ದರು. ಅದಕ್ಕೂ ಒಪ್ಪಿಕೊಂಡೆ. ಅತ್ತ ಕಾಂಗ್ರೆಸ್‌ ನಾಯಕರು ಯೋಗೇಶ್ವರ್‌ ಸ್ವಾಗತಕ್ಕೆ ಸರದಿಯಲ್ಲಿ ನಿಂತಿದ್ದಾರೆ. ಇನ್ನು ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವುದಿಲ್ಲ’ ಎಂದರು.

ನಿಖಿಲ್‌ಗೆ ಟಿಕೆಟ್‌, ಕಾರ್ಯಕರ್ತರ ಪಟ್ಟು: 

‘ಯುವ ಜನತಾದಳದ ಅಧ್ಯಕ್ಷ ನಿಖಿಲ್‌ಗೆ ಟಿಕೆಟ್‌ ನೀಡಬೇಕು. ಯೋಗೇಶ್ವರ್‌ಗೆ ಟಿಕೆಟ್‌ ನೀಡಬಾರದು’ ಎಂದು ಒತ್ತಾಯಿಸಿದ ಕಾರ್ಯಕರ್ತರು, ನಿಖಿಲ್‌ ಪರ ನಿರಂತರ ಘೋಷಣೆ ಕೂಗಿದರು.

ಕಾರ್ಯಕರ್ತರ ಆಕ್ರೋಶ ಮುಂದುವರಿದ ಕಾರಣ ಕುಮಾರಸ್ವಾಮಿ ಹಾಗೂ ನಿಖಿಲ್‌ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ ಬಾಬು, ಮಾಜಿ ಸಚಿವರಾದ ಸಾ.ರಾ. ಮಹೇಶ್, ವೆಂಕಟರಾವ್‌ ನಾಡಗೌಡ, ಶಾಸಕ ಶರಣುಗೌಡ ಕಂದಕೂರ, ವಿಧಾನಪರಿಷತ್ ಸದಸ್ಯ ಮಂಜೇಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್‌ ಗೌಡ, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಜಯಮುತ್ತು, ಹಿರಿಯ ಮುಖಂಡ ಪ್ರಸನ್ನ ಉಪಸ್ಥಿತರಿದ್ದರು.

ಯೋಗೇಶ್ವರ್ ಬಳಿ ಐದು ಬಿ ಫಾರಂ: ನಿಖಿಲ್‌ ಕುಮಾರಸ್ವಾಮಿ

ಕಾಂಗ್ರೆಸ್‌ ಸೇರಲು ಸಜ್ಜಾಗಿರುವ ಸಿ.ಪಿ. ಯೋಗೇಶ್ವರ್‌ ಜೇಬಿನಲ್ಲಿ ಐದು ಬಿ ಫಾರಂ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ ಎಂದು ಯುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಟೀಕಿಸಿದರು.  

‘ನಾವು ಹೊಂದಾಣಿಕೆ ರಾಜಕೀಯ ಮಾಡಲ್ಲ. ಒಂದು ಪಕ್ಷದಲ್ಲಿ ಇದ್ದು ಬೇರೆ ಪಕ್ಷಗಳ ಬಿ ಫಾರಂ ಇಟ್ಟುಕೊಂಡು ಓಡಾಡುವುದು ಗೊತ್ತಿಲ್ಲ. ಹಾಗೆ ಮಾಡುವ ಜಾಯಮಾನವೂ ನಮ್ಮದಲ್ಲ’ ಎಂದರು.

‘ರಾಜ್ಯ ಬಿಜೆಪಿ ನಾಯಕರು ಸಹ ಯೋಗೇಶ್ವರ್‌ ಪರ ನಿಂತಿದ್ದಾರೆ. ಆದರೆ, ಅವರು ಕಾಂಗ್ರೆಸ್‌ ಬಾಗಿಲು ಬಡಿಯುತ್ತಿದ್ದಾರೆ. ಯಾರು ಏನೇ ಮಾಡಲಿ ಚುನಾವಣೆಗೆ ಹೆದರಿ ಕೂರುವುದಿಲ್ಲ. ಚನ್ನಪಟ್ಟಣದಲ್ಲಿ ನಮ್ಮದೇ ಮತಗಳಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.