ADVERTISEMENT

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವರಿಷ್ಠರ ನಿರ್ಧಾರ: ನಿಖಿಲ್‌ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 19:34 IST
Last Updated 13 ಜೂನ್ 2024, 19:34 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ   

ಬೆಂಗಳೂರು: ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ಎರಡೂ ಪಕ್ಷಗಳ ನಾಯಕರು ನಿರ್ಧರಿಸಲಿದ್ದಾರೆ. ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್‌ ಮಣಿಸಲು ಶ್ರಮಿಸುತ್ತೇವೆ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

‘ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಸಹ ಆಕಾಂಕ್ಷಿ. ಹಲವು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ಸಲ್ಲಿಸಲಾಗುವುದು. ನಂತರ ಮೈತ್ರಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು. ಸದ್ಯಕ್ಕೆ ನನ್ನ ಸ್ಪರ್ಧೆಯ ಬಗ್ಗೆ ಚರ್ಚೆ ಅಪ್ರಸ್ತುತ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಿನಿಮಾ ಕ್ಷೇತ್ರದ ಚಟುವಟಿಕೆಗಳಿಗೆ ಸದ್ಯಕ್ಕೆ ವಿರಾಮ ನೀಡಿ, ಪಕ್ಷದ ಸಂಘಟನೆಯತ್ತ ಗಮನ ಹರಿಸುವೆ. ಹಾಸನದ ಸೋಲು ನಿರೀಕ್ಷೆ ಮಾಡಿರಲಿಲ್ಲ. ಸೋಲಿನ ಕಾರಣಗಳನ್ನೂ ಬಹಿರಂಗವಾಗಿ ವಿಶ್ಲೇಷಣೆ ಮಾಡದೇ, ಪಕ್ಷದ ವೇದಿಕೆಯಲ್ಲೇ ಚರ್ಚಿಸಿ, ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತೆ ಬಲಗೊಳಿಸಲು ಶ್ರಮಿಸುತ್ತೇವೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವ ಕುರಿತು ಕಾಂಗ್ರೆಸ್‌ ನಾಯಕರೇ ಮಾತನಾಡುತ್ತಿದ್ದಾರೆ. ರದ್ದು ಮಾಡಿದರೆ ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.