ADVERTISEMENT

ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ: ‘ಕೈ’ಗೆ ಬಲ; ಮೈತ್ರಿ ವಿಫಲ

ವೈ.ಗ.ಜಗದೀಶ್‌
Published 23 ನವೆಂಬರ್ 2024, 19:14 IST
Last Updated 23 ನವೆಂಬರ್ 2024, 19:14 IST
   

ವೈ.ಗ. ಜಗದೀಶ್

ಬೆಂಗಳೂರು: ಕೋಮು ಧ್ರುವೀಕರಣ, ಸಿದ್ದರಾಮಯ್ಯನವರ ಸೊಕ್ಕು ಮುರಿಯುತ್ತೇವೆಂಬ ಮಾತುಗಳ ಜತೆ, ಗ್ಯಾರಂಟಿಗಳ ಅವಹೇಳನ ಹಾಗೂ ಮೈತ್ರಿ ಕೂಟದ ಕುಟುಂಬ ರಾಜಕಾರಣವನ್ನೂ ಧಿಕ್ಕರಿಸಿರುವ ಮತದಾರರು, ಕಾಂಗ್ರೆಸ್‌ ಅನ್ನು ಗೆಲ್ಲಿಸಿದ್ದಾರೆ. ಹೀಗಾಗಿ, ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ವಿಜಯ ದುಂದುಭಿ ಮೊಳಗಿಸಿದೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಗೆದ್ದಿದ್ದ ತಲಾ ಒಂದು ಸ್ಥಾನವನ್ನು ಕಾಂಗ್ರೆಸ್ ಕಿತ್ತುಕೊಂಡಿದ್ದು, ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಮುಖಭಂಗವಾಗಿದೆ.

ADVERTISEMENT

ರಾಮನಗರ ಹಾಗೂ ಚನ್ನಪಟ್ಟಣ ತನ್ನ ಎರಡು ಕಣ್ಣುಗಳೆಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಹೇಳುತ್ತಿದ್ದರು. 2023ರಲ್ಲಿ ರಾಮನಗರದಲ್ಲಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ, ಉಪ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕಣಕ್ಕೆ ಇಳಿದಿದ್ದರು. ಅಲ್ಲಿಯೂ ಭಾರಿ ಅಂತರದಲ್ಲಿ ಸೋಲುಂಡಿದ್ದಾರೆ. ಅಲ್ಲಿಗೆ, ಕುಮಾರಸ್ವಾಮಿಯವರಿಗೆ ರಾಜಕೀಯ ಮರುಜನ್ಮ ನೀಡಿದ್ದ ರಾಮನಗರ ಸಂಪೂರ್ಣವಾಗಿ ಅವರ ಕೈತಪ್ಪಿದೆ.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ, ಮುಖ್ಯಮಂತ್ರಿ ಯೂ ಆಗಿದ್ದ ಸಂಸದ ಬಸವರಾಜ ಬೊಮ್ಮಾಯಿ, ಶಿಗ್ಗಾವಿಯಲ್ಲಿ ಏನೆಲ್ಲಾ ಪ್ರಯಾಸಪಟ್ಟರೂ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶ ಸಿಗಲಿಲ್ಲ.

ಹಾಗಂತ, ಕಾಂಗ್ರೆಸ್ ಪಕ್ಷಕ್ಕೆ ‘ಭೇಷ್’ ಎನ್ನುವ ಸಂದೇಶವನ್ನೇನೂ ಮತದಾರರು ನೀಡಿಲ್ಲ. ಸಲೀಸಿನ ಗೆಲುವು ಎಂದು ಕಾಂಗ್ರೆಸ್ ನಾಯಕರು ಅಂದಾಜಿಸಿದ್ದ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಹೆಣಗಾಡಿ ಗೆಲ್ಲುವ ಪರಿಸ್ಥಿತಿ ಎದುರಾಗಿತ್ತು. ಇದು, ಆಳುವ ಪಕ್ಷಕ್ಕೆ ಎಚ್ಚರಿಕೆಯ ಗಂಟೆ. ಆದರೆ, ಫಲಿತಾಂಶವು ಸರ್ಕಾರ ಉರುಳಿಸುವ ಯತ್ನಕ್ಕೆ ಕಡಿವಾಣ ಹಾಕಲಿದ್ದು, ಸಿದ್ದರಾಮಯ್ಯ ನಾಯಕತ್ವಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ಉಪಚುನಾವಣೆಯು ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠೆಯಾಗಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ತಮ್ಮ ಡಿ.ಕೆ. ಸುರೇಶ್‌ ಅವರನ್ನು ಸೋಲಿಸಿದ ಬಳಿಕ ರೊಚ್ಚಿಗೆದ್ದಿದ್ದ ಶಿವಕುಮಾರ್, ರಾಮನಗರ ಜಿಲ್ಲೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಕುಮಾರಸ್ವಾಮಿಯವರ ಹಸ್ತಕ್ಷೇಪ ಇಲ್ಲದಂತೆ ಮಾಡುವ ಹಟಕ್ಕೆ ಬಿದ್ದಿದ್ದರು. ಹೀಗಾಗಿ, ಚನ್ನಪಟ್ಟಣ ಚುನಾವಣೆ ಎರಡು ಕುಟುಂಬಗಳಿಗೆ ತಮ್ಮ ರಾಜಕೀಯ ಅಸ್ತಿತ್ವ ಸಾಬೀತುಪಡಿಸುವ ಕಣವೂ ಆಗಿತ್ತು. 

ಗ್ಯಾರಂಟಿಗಳೇ ಸುಳ್ಳು ಎಂದು ನಿತ್ಯವೂ ಅಪಪ್ರಚಾರ ಮಾಡುತ್ತಾ, ಸಂಪತ್ತಿನ ಅಲ್ಪಪಾಲನ್ನು ದುರ್ಬಲರಿಗೆ ಹಂಚುವ ಜನಪರ ಯೋಜನೆಯನ್ನೇ ಹೀಗಳೆಯುತ್ತಿದ್ದ ಬಿಜೆಪಿ–ಜೆಡಿಎಸ್ ನಾಯಕರಿಗೆ ಮತದಾರರು ಉತ್ತರ ನೀಡಿದ್ದಾರೆ. 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯ ಪ್ರಕರಣವನ್ನು ಮುಂದಿಟ್ಟು, ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಬಿಜೆಪಿ–ಜೆಡಿಎಸ್ ನಾಯಕರು ಮೈಸೂರುವರೆಗೆ ಪಾದಯಾತ್ರೆ ನಡೆಸಿದ್ದರು. ‘ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇವೆ. ಅವರ ಸೊಕ್ಕು ಮುರಿಯಬೇಕು’ ಎಂದು ಮಿತ್ರಕೂಟದ ನಾಯಕರು ಹೇಳಿದ್ದರು. ‘ಈ ಸರ್ಕಾರ ತೊಲಗಿಸುವವರೆಗೆ ವಿರಮಿಸುವುದಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರು ಹೇಳಿದ್ದರು. ಈ ಎಲ್ಲ ಮಾತು ಮೈತ್ರಿಕೂಟಕ್ಕೆ ತಿರುಗುಬಾಣವಾಗಿದೆ. ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಇಳಿಸುವ ಮಾತುಗಳಿಂದಾಗಿ, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಮತಗಳು ಕ್ರೋಡೀಕರಣಗೊಂಡು, ಕಾಂಗ್ರೆಸ್‌ನತ್ತ ವಾಲಿದವು. ಜತೆಗೆ, ಸಣ್ಣ ಸಣ್ಣ ಜಾತಿ–ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಕಾಂಗ್ರೆಸ್ ನಾಯಕರು, ಮೈತ್ರಿಕೂಟದ ವಿರುದ್ಧ ತಂತ್ರ ಹೆಣೆದರು. ಇದು ಯಶಸ್ವಿಯಾದಂತೆ ಗೋಚರಿಸುತ್ತಿದೆ.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ಅಂಗೀಕರಿಸಲಾಗುವುದು ಮತ್ತು ಒಳಮೀಸಲಾತಿ ಜಾರಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿಕೊಂಡೇ ಬಂದರು. ಒಕ್ಕಲಿಗರು ಮತ್ತು ವೀರಶೈವ ಲಿಂಗಾಯತರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಚುನಾವಣೆ ಹೊತ್ತಿನೊಳಗೆ, ಎರಡು ಪ್ರಬಲ ಸಮುದಾಯಗಳು ಹೀಗೆ ವರ್ತಿಸಿದ್ದು, ಅಹಿಂದ ಮತಗಳು ಕಾಂಗ್ರೆಸ್‌ ಬೆನ್ನಿಗೆ ನಿಲ್ಲಲು ಕಾರಣವಾಯಿತು. ಮೂರು ಕ್ಷೇತ್ರಗಳ ಫಲಿತಾಂಶವನ್ನು ಕಾಂಗ್ರೆಸ್‌ ಪರವಾಗಿಸಲು ಈ ಬೆಳವಣಿಗೆ ನೆರವಾಯಿತು. 

‘ಕರ್ನಾಟಕದಲ್ಲಿ ಕೋಮು ಧ್ರುವೀಕರಣ ಮತ್ತು ಮತದ್ವೇಷದ ರಾಜಕಾರಣ ನಡೆಯುವುದಿಲ್ಲ’ ಎಂಬುದನ್ನು 2023ರ ಚುನಾವಣೆ ತೋರಿಸಿಕೊಟ್ಟಿತ್ತು. ಅದರಿಂದ ಪಾಠ ಕಲಿಯದ ಬಿಜೆಪಿ ನಾಯಕರು, ಉಪಚುನಾವಣೆಯಲ್ಲಿ ಅದನ್ನೇ ಪ್ರಧಾನ ಅಸ್ತ್ರವಾಗಿ ಬಳಸಿದರು. ವಕ್ಫ್‌ ಮಂಡಳಿ ನೋಟಿಸ್‌ ನೀಡಿದ್ದನ್ನು ಬಹುದೊಡ್ಡ ವಿವಾದವಾಗಿಸಿ, ರಾಜಕೀಯ ಬೆಳೆ ತೆಗೆಯಲು ಯತ್ನಿಸಿದರು. ಅದೇನೂ ಫಲ ನೀಡಿದಂತೆ ಕಾಣಿಸುತ್ತಿಲ್ಲ.

ಕುಟುಂಬ ರಾಜಕಾರಣವನ್ನು ದೊಡ್ಡ ಧ್ವನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರೋಧಿಸುತ್ತಲೇ ಬಂದಿದ್ದಾರೆ. ಈ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಕಣಕ್ಕೆ ತಳ್ಳಲಾಗಿತ್ತು. ಆ ಪಕ್ಷದ ಮಟ್ಟಿಗೆ ಕುಟುಂಬ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ನ ವಿಷಯದಲ್ಲಿ ಕುಟುಂಬಕ್ಕೆ ಮಣೆ ಹಾಕಿ, ಸಂಸದ ಇ. ತುಕಾರಾಂ ಪತ್ನಿ ಅನ್ನಪೂರ್ಣಾ ಅವರನ್ನು ಗೆಲ್ಲಿಸಿದ್ದಾರೆ.

ಒಕ್ಕಲಿಗ ಸಮುದಾಯದ ಮತಗಳೆಲ್ಲ ತಮ್ಮ ಜೇಬಿನಲ್ಲಿಯೇ ಇವೆ ಎಂಬ ಜೆಡಿಎಸ್‌ ನಾಯಕರ ಲೆಕ್ಕವನ್ನೂ ಚುನಾವಣೆ ಹುಸಿಗೊಳಿಸಿದೆ. ಚನ್ನಪಟ್ಟಣದಲ್ಲಿ ಒಕ್ಕಲಿಗ ಮತಗಳೆಲ್ಲ ಯೋಗೇಶ್ವರ್‌ಗೆ ಬಿದ್ದವೆಂದು ಹೇಳಲಾಗದು. ಒಕ್ಕಲಿಗರು ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಅದೇ ಸಮುದಾಯದ ಯೋಗೇಶ್ವರ್ ಗೆದ್ದಿದ್ದಾರೆ. 

ವಿಜಯೇಂದ್ರಗೆ ತೀವ್ರ ಹಿನ್ನಡೆ

ಬಿಜೆಪಿ ರಾಜ್ಯ ಘಟಕದ ಚುಕ್ಕಾಣಿ ಹಿಡಿದ ಬಳಿಕ ಮೊದಲ ಬಾರಿಗೆ ಎದುರಿಸಿದ ಉಪ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಮುಗ್ಗರಿಸಿದ್ದಾರೆ.

‘ಮೂರು ಕಡೆ ಗೆಲ್ಲುತ್ತೇವೆ’ ಎಂದು ಹೇಳುತ್ತಿದ್ದ ವಿಜಯೇಂದ್ರ ಅವರಿಗೆ ಪಕ್ಷದ ಹಿಡಿತದಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲೂ ಆಗಲಿಲ್ಲ. ಸಂಡೂರಿನ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡು ಮುನ್ನಡೆಸಿದ ವಿಜಯೇಂದ್ರ, ಅಲ್ಲಿ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಕೊಡಿಸುವುದಕ್ಕಷ್ಟೇ ಸೀಮಿತರಾಗಿದ್ದಾರೆ. 

ವಿಜಯೇಂದ್ರ ನಾಯಕತ್ವದ ವಿರುದ್ಧ ಬಂಡೆದ್ದಿರುವ ಬಸನಗೌಡ ಪಾಟೀಲ ಯತ್ನಾಳ ಹಾಗೂ ರಮೇಶ ಜಾರಕಿಹೊಳಿ ಬಣ ಇದನ್ನು ಸಹಜವಾಗಿ ಬಳಸಿಕೊಳ್ಳಲಿದೆ. ಅವರನ್ನು ಪದಚ್ಯುತಗೊಳಿಸಬೇಕೆಂಬ ಭಿನ್ನರ ಬಣಕ್ಕೆ ಈ ಫಲಿತಾಂಶ ಅಸ್ತ್ರವಾಗಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿರುಸು ಪಡೆಯಲಿದೆ.

ಮೂವರು ಶಾಸಕರು, ಮೂವರು ಮಾಜಿ ಸಂಸದರು ಹಾಗೂ ಕೆಲವು ಮಾಜಿ ಶಾಸಕರು ಭಿನ್ನರ ಬಣದ ನೇತೃತ್ವ ವಹಿಸಿದ್ದಾರೆ. ತಮ್ಮ ಬಲ 130ಕ್ಕೂ ಹೆಚ್ಚಿದೆ ಎಂದು ಈ ಗುಂಪು ಹೇಳಿಕೊಳ್ಳುತ್ತಿದ್ದು, ಬಣದ ಬೆಂಬಲಕ್ಕೆ ಮತ್ತಷ್ಟು ಮಂದಿ ಸೇರ್ಪಡೆಯಾಗಲು ಫಲಿತಾಂಶ ದಾರಿ ಮಾಡಿಕೊಡಲಿದೆ.

ಬಿಎಸ್‌ವೈ ನಾಯಕತ್ವಕ್ಕೆ ಧಕ್ಕೆ:

ಬಿ.ಎಸ್. ಯಡಿಯೂರಪ್ಪ ಲಿಂಗಾಯತರ ಪ್ರಶ್ನಾತೀತ ನಾಯಕರಲ್ಲ ಎಂಬುದನ್ನು ಈ ಚುನಾವಣೆ ಧೃಡಪಡಿಸಿದೆ. ಲಿಂಗಾಯತರ ಮತಗಳೂ ನಿರ್ಣಾಯಕರಾಗಿರುವ ಸಂಡೂರು, ಶಿಗ್ಗಾವಿಗಳಲ್ಲಿ ಬಿಜೆಪಿ ಸೋಲುಕಂಡಿದೆ. ಶಿಗ್ಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಮತಗಳು ಭರತ್ ಬೊಮ್ಮಾಯಿಗೆ ಕೈಕೊಟ್ಟಂತೆ ಕಾಣಿಸುತ್ತಿದೆ. 

ಬಿಜೆಪಿಯಲ್ಲಿನ ಬಣ ಜಗಳ ಎರಡೂ ಕ್ಷೇತ್ರದಲ್ಲಿ ಪರಿಣಾಮ ಬೀರಿದೆ. ಕಾಂಗ್ರೆಸ್ ನಾಯಕರು ಸಂಘಟಿತ ಪ್ರಯತ್ನದಿಂದ ಚುನಾವಣೆ ಎದುರಿಸಿದರು.

ಜಮೀರ್ ಯತ್ನಕ್ಕೆ ಬಲ:

ಶಿಗ್ಗಾವಿಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಆ ಸಮುದಾಯದ ಮುಖಂಡರು ಪಟ್ಟು ಹಿಡಿದಿದ್ದರು. ಈ ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡ ಜಮೀರ್‌, ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿಯವರನ್ನು ಜತೆಗಿಟ್ಟುಕೊಂಡು, ಪಠಾಣ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಬೊಮ್ಮಾಯಿ ಬೆಂಬಲಕ್ಕೆ ಇದ್ದ ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಕಡೆಗೆ ತಿರುಗಿಸಿದ್ದು, ಹಿಂದುಳಿದವರ ಮತಗಳ ಜತೆಗೆ ಮುಸ್ಲಿಂ ಮತಗಳು ಕೂಡುವಂತೆ ಮಾಡಿದ್ದು ಇಲ್ಲಿ ಫಲ ಕೊಟ್ಟಿದೆ.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರನ್ನು ‘ಕರಿಯ’ ಎಂದು ಕರೆದಿದ್ದ ಜಮೀರ್, ಮೈ ಬಣ್ಣವನ್ನು ಅವಹೇಳನ ಮಾಡುವ ಕೆಲಸ ಮಾಡಿದ್ದರು. ಇದು ಬಾರಿ ಹೊಡೆತ ನೀಡುತ್ತದೆ ಎಂದು ಅಂದಾಜಿಸಲಾಗಿತ್ತು. ಅದಕ್ಕೆ ಪ್ರತಿಯಾಗಿ ಸಮುದಾಯ ಮತಗಳು ಚದುರದಂತೆ ಜಮೀರ್ ತಂತ್ರ ಹೆಣೆದರು. ಇದು ಎರಡು ಕ್ಷೇತ್ರಗಳು ಕಾಂಗ್ರೆಸ್‌ ದಕ್ಕಲು ನೆರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.