ADVERTISEMENT

ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ; ಟಿಕೆಟ್‌ಗಾಗಿ ಜಂಗೀ ಕುಸ್ತಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 0:12 IST
Last Updated 18 ಅಕ್ಟೋಬರ್ 2024, 0:12 IST
<div class="paragraphs"><p>ಉಪಚುನಾವಣೆ (ಪ್ರಾತಿನಿಧಿಕ ಚಿತ್ರ)</p></div>

ಉಪಚುನಾವಣೆ (ಪ್ರಾತಿನಿಧಿಕ ಚಿತ್ರ)

   
ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಕಣ ದಿನೇದಿನೇ ಕಳೆಗಟ್ಟುತ್ತಿದೆ. ಮೂರೂ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ತೀವ್ರಗೊಂಡಿದೆ. ಎಲ್ಲ ಪಕ್ಷಗಳ ಕಚೇರಿ– ನಾಯಕರ ಮನೆಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಗುರುವಾರದ ಬೆಳವಣಿಗೆಗಳೂ ಇದಕ್ಕೆ ಹೊರತಾಗಿರಲಿಲ್ಲ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ನಡೆಸಿದರು. ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಬುಧವಾರ ರಾತ್ರಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಜತೆ ಸಮಾಲೋಚನೆ ನಡೆಸಿ, ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಬೇಕು ಎಂದು ತಾಕೀತು ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಹೊಸ ಹೊಸ ಆಕಾಂಕ್ಷಿಗಳು  ಹುಟ್ಟಿಕೊಳ್ಳುತ್ತಿದ್ದಾರೆ. ತಮಗೇ ಟಿಕೆಟ್ ಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ.

‘ನಾನೇ ಅಭ್ಯರ್ಥಿ’–‘ತೀರ್ಮಾನ ನನ್ನದು’

ತೀವ್ರ ಕುತೂಹಲ ಕೆರಳಿಸಿರುವುದು ಚನ್ನಪಟ್ಟಣ ಕ್ಷೇತ್ರ. ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಮೂಲಗಳ ಪ್ರಕಾರ, ಬಿಜೆಪಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಿದೆ. ಆದರೆ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್‌ ಗುರುವಾರವಷ್ಟೇ, ‘ಇಲ್ಲಿ ನಾನೇ ಎನ್‌ಡಿಎ ಅಭ್ಯರ್ಥಿ. ಒಂದೆರಡು ದಿನದಲ್ಲಿ ನನ್ನ ಹೆಸರು ಘೋಷಣೆಯಾಗುತ್ತದೆ ನೋಡಿ’ ಎಂದಿದ್ದಾರೆ. ತಮಗೆ ಟಿಕೆಟ್ ಸಿಗದಿದ್ದರೆ, ಕಾರ್ಯಕರ್ತರು ಹೇಳಿದಂತೆ ಕೇಳುತ್ತೇನೆ ಎಂದಿದ್ದಾರೆ. ಜತೆಗೆ, ‘ಉದ್ಯಮಿಯಾಗೇ ಇರು ಎಂದು ಡಿ.ಕೆ.ಶಿವಕುಮಾರ್‌ ಬಹಳ ಹಿಂದೆ ಹೇಳಿದ್ದನ್ನು ನಾನು ಕೇಳಬೇಕಿತ್ತು’ ಎಂದೂ ಹೇಳಿದ್ದಾರೆ.

ADVERTISEMENT

ಅವರ ಮಾತಿಗೆ ಪ್ರತಿಕ್ರಿಯಿಸಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ‘ಇಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ದೆಹಲಿ ನಾಯಕರು ನನಗೇ ನೀಡಿದ್ದಾರೆ. ಚರ್ಚಿಸಿ ಇದನ್ನು ತೀರ್ಮಾನಿಸಲಾಗುತ್ತದೆ’ ಎಂದಿದ್ದಾರೆ.

ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಾರೆ ಎಂಬ ಮಾತು ಚಾಲ್ತಿಯಲ್ಲಿದೆ. ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂಬ ಮಾತೂ ಗುರುವಾರ ಮುನ್ನೆಲೆಗೆ ಬಂದಿದೆ.

ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್‌ ಕಣಕ್ಕೆ ಇಳಿಯಬಹುದು ಎಂಬ ಬಗ್ಗೆ ಪಕ್ಷದ ನಾಯಕರೇ ಸುಳಿವು ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್‌ ಶಾಸಕ ತನ್ವೀರ್ ಸೇಠ್‌, ‘ಡಿ.ಕೆ.ಸುರೇಶ್ ಅವರು ರಾಜಕೀಯದಲ್ಲಿ ಮುಂದುವರೆಯುವುದು ಕಾಂಗ್ರೆಸ್‌ಗೆ ಅನಿವಾರ್ಯ’ ಎಂದಿದ್ದಾರೆ. ಜತೆಗೆ, ಸುರೇಶ್ ಪರವಾಗಿ ಅವರ ಆಪ್ತರು ಕೊಲ್ಲೂರಿನಲ್ಲಿ ಚಂಡಿಕಾಯಾಗ ಮಾಡಿಸಿದ್ದಾರೆ. ಈ ಮಧ್ಯೆ ತೇಜಸ್ವಿನಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು, ‘ನನಗೆ ಟಿಕೆಟ್‌ ಕೊಡಿ’ ಎಂದು ಕೋರಿದ್ದಾರೆ.

ಬೊಮ್ಮಾಯಿ ಪುತ್ರ ಕಣಕ್ಕೆ?

ಶಿಗ್ಗಾವಿ ಕ್ಷೇತ್ರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂಬ ಮಾತು ದಿನೇದಿನೇ ಗಟ್ಟಿಯಾಗುತ್ತಿದೆ. ಮಗನಿಗೆ ಟಿಕೆಟ್ ಕೊಡಿಸಲು ಅವರು ತೆರೆಮರೆಯ ಯತ್ನ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಆದರೆ ಅವರು ಇದನ್ನು ನಿರಾಕರಿಸಿದ್ದಾರೆ. ‘ಪಕ್ಷ ಯಾರನ್ನೇ ನಿಲ್ಲಿಸಿದರೂ ಗೆಲ್ಲಿಸಿಕೊಂಡು ಬರಲು ಸಿದ್ಧನಿದ್ದೇನೆ’ ಎಂದು ಅವರು ಗುರುವಾರ ಹೇಳಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಅವರು, ‘ಚುನಾವಣೆಗೆ ಸಿದ್ಧತೆ ಬಗ್ಗೆ ವಿವರಿಸಿದ್ದೇನೆ. ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲಾಯಿತು’ ಎಂದಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಮತ್ತೆ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಪಕ್ಷದಲ್ಲಿ ಒತ್ತಡ ಹೆಚ್ಚುತ್ತಿದೆ. ಶಾಸಕ ತನ್ವೀರ್ ಸೇಠ್‌, ‘ಸಾಮಾಜಿಕ ನ್ಯಾಯ ಒದಗಿಸಬೇಕಾದರೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆ ಇಡಲಾಗಿದೆ’ ಎಂದಿದ್ದಾರೆ. 

‘ತುಕಾರಾಂ ಕುಟುಂಬಕ್ಕೆ ಟಿಕೆಟ್‌ ಬೇಡ’

‘ನನ್ನ ಪತ್ನಿ ಅನ್ನಪೂರ್ಣಗೆ ವಿಧಾನಸಭಾ ಟಿಕೆಟ್‌ ನೀಡಬೇಕು’ ಎಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲೇ ಇ.ತುಕಾರಾಂ ಷರತ್ತು ಹಾಕಿದ್ದರು. ಅನ್ನಪೂರ್ಣ ಅವರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾದರೂ, ತುಮಟಿ ಲಕ್ಷ್ಮಣ ಟಿಕೆಟ್‌ಗಾಗಿ ಪಟ್ಟು ಬಿಗಿಗೊಳಿಸಿದ್ದಾರೆ. ಗುರುವಾರವಷ್ಟೇ ಸಂತೋಷ್‌ ಲಾಡ್‌ ಅವರ ಮನೆಗೆ 300–400 ಜನರನ್ನು ಕರೆದುಕೊಂಡು ಹೋಗಿದ್ದ ಲಕ್ಷ್ಮಣ, ‘ಕ್ಷೇತ್ರದಲ್ಲಿ ಪಕ್ಷದ ಹೆಸರನ್ನು ತುಕಾರಾಂ ಹಾಳುಮಾಡಿದ್ದಾರೆ. ಅವರಿಗೆ ಟಿಕೆಟ್‌ ನೀಡಬಾರದು. ಬೇರೆ ಯಾರನ್ನು ನಿಲ್ಲಿಸಿದರೂ ಗೆಲ್ಲಿಸಿಕೊಂಡು ಬರುತ್ತೇವೆ’ ಎಂದು ಒತ್ತಾಯಿಸಿದ್ದಾರೆ.

ಜನಾರ್ದನ ರೆಡ್ಡಿ ಆಪ್ತ ಕೆ.ಎಸ್‌.ದಿವಾಕರ್‌ ಅವರು ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಾರೆ ಎಂಬ ಮಾತು ಬಲವಾಗುತ್ತಿದೆ. ಆದರೆ ತಮಗೆ ಅಥವಾ ತಮ್ಮ ಮಗನಿಗೆ ಟಿಕೆಟ್‌ ನೀಡಬೇಕು ಎಂದು ಮಾಜಿ ಸಂಸದ ದೇವೇಂದ್ರಪ್ಪ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.