ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೀಶ್ವರ್ ಅವರಿಗೆ ಟಿಕೆಟ್ ನೀಡುವ ಕುರಿತು ಪಕ್ಷದ ವರಿಷ್ಠರು ಹಾಗೂ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಜೊತೆ ಚರ್ಚಿಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಯೋಗೀಶ್ವರ್ ಅವರು ನನ್ನನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಅವರ ಮನೆಗೂ ಭೇಟಿ ನೀಡಿದ್ದೆ. ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ದೆಹಲಿಗೆ ತೆರಳಿ ಮಾತುಕತೆ ನಡೆಸಲಾಗುವುದು. ಎರಡೂ ಪಕ್ಷಗಳ ನಿರ್ಧರಿಸಿದ ನಂತರ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ’ ಎಂದರು.
‘ಕಾಂಗ್ರೆಸ್ ಶಾಸಕರಿಗೆ ಹಣ ನೀಡಿದ ಬಿಜೆಪಿ ನಾಯಕರ ಹೆಸರು ಬಹಿರಂಗ ಮಾಡದೇ ಇದ್ದರೆ ಹಿಟ್ ಆ್ಯಂಡ್ ರನ್ ಆಗುತ್ತದೆ. ಕಾಂಗ್ರೆಸ್‌ನವರು ಜೆಡಿಎಸ್‌ನ ಕುಮಾರಸ್ವಾಮಿ ವಿರುದ್ಧ ಸದಾ ಇಂತಹ ಆರೋಪ ಮಾಡುತ್ತಾರೆ. ಹೆಸರು ಬಹಿರಂಗ ಮಾಡದಿದ್ದರೆ ನಿಮ್ಮನ್ನೇ ಹಾಗೆ ಕರೆಯುತ್ತೇವೆ’ ಎಂದರು.
‘ಮುಡಾ’ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಗಮನ ಬೇರೆಕಡೆ ಸೆಳೆಯಲು ಕಾಂಗ್ರೆಸ್ ಶಾಸಕರು ಇಂತಹ ಕುತಂತ್ರ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಿದರು.
ಸರ್ಕಾರದಲ್ಲಿ ಹಣವಿಲ್ಲದೆ, ಮದ್ಯದ ತೆರಿಗೆಯನ್ನು ಮೂರನೇ ಬಾರಿಗೆ ಏರಿಕೆ ಮಾಡಲು ಸಿದ್ಧತೆ ನಡೆಸಿದೆ. ಉಸಿರಾಡುವ ಗಾಳಿಗೂ ತೆರಿಗೆ ಹಾಕಿದರೂ ಆಶ್ಚರ್ಯವಿಲ್ಲ. ಗ್ಯಾರಂಟಿಗೆ ಹಣವಿಲ್ಲದೆ ಸರ್ಕಾರ ದಿವಾಳಿಯಾಗಿದೆ. ಇಂತಹ ಸಮಯದಲ್ಲೂ ಮುಖ್ಯಮಂತ್ರಿ ಕುರ್ಚಿಗೆ ಕಚ್ಚಾಡುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆರೋಪಗಳ ಕುರಿತು ಕಾನೂನು ಹೋರಾಟ ನಡೆಸಲು ಬಿಜೆಪಿ-ಜೆಡಿಎಸ್ ಚರ್ಚೆ ನಡೆಯುತ್ತಿವೆ. ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ಧದ ಹೋರಾಟವೂ ಮುಂದುವರಿಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.