ಹೊಳೆನರಸೀಪುರ: ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ದೆಹಲಿಯಲ್ಲಿ ಬಿಜೆಪಿ ನಾಯಕರ ಜೊತೆಗೆ ಚರ್ಚಿಸಿ ವಾರದಲ್ಲಿ ಅಂತಿಮಗೊಳಿಸಲಾಗುವುದು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬೀದರಕ್ಕ ಗ್ರಾಮದಲ್ಲಿ ಸೋಮವಾರ ಕೊಳಲು ಗೋಪಾಲಕೃಷ್ಣ ದೇವಾಲಯ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚನ್ನಪಟ್ಟಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅಭ್ಯರ್ಥಿಯಾದರೆ ನಾನೂ ಅಭ್ಯರ್ಥಿ ಆಗಲೇಬೇಕಲ್ಲ? ಇನ್ನೂ ಹಲವರ ಹೆಸರುಗಳಿವೆ’ ಎಂದರು.
‘ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ, ಕೆಲವು ಎನ್ಐಎ ವ್ಯಾಪ್ತಿಯ ಪ್ರಕರಣವೂ ಇದ್ದು ಅದನ್ನು ಹಿಂಪಡೆಯಲಾಗುವುದಿಲ್ಲ. ಅಮಾಯಕರಿದ್ದರೆ ವಾಪಸ್ ಪಡೆಯಲು ನಮ್ಮ ಅಭ್ಯಂತರವಿಲ್ಲ. ಸಮಾಜಘಾತುಕ ಹಿನ್ನೆಲೆಯವರಿಗೆ ರಕ್ಷಣೆ ಕೊಡುವುದು ಮಹಾ ಅಪರಾಧವಾಗುತ್ತದೆ. ಸರ್ಕಾರ ಏನೇನು ಮಾಡುತ್ತದೆಯೋ ನೋಡೋಣ’ ಎಂದು ಹೇಳಿದರು.
‘₹500 ಕೋಟಿ ಕಟ್ಟಿಸಿಕೊಂಡು ದೇವಗಿರಿಯಲ್ಲಿ ಗಣಿಗಾರಿಕೆಗೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಗೆ ಸರ್ಕಾರವೇ ಅನುಮತಿ ನೀಡಿದೆ. ಅದಿರು ಉತ್ಪಾದನೆಯಾದ ಮೇಲೆ ಅರಣ್ಯೀಕರಣ ಮಾಡಲು ₹190 ಕೋಟಿ ಕಟ್ಟಿಸಿಕೊಂಡಿದ್ದಾರೆ. ಇದೆಲ್ಲವೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಗೊತ್ತಿಲ್ಲವೇ’ ಎಂದು ಕೇಳಿದರು.
‘ಗಣಿಗಾರಿಕೆಯನ್ನು ಎಲ್ಲಿ ನಿಷೇಧಿಸಿದ್ದಾರೆ, ಎಲ್ಲೂ ಗಣಿಗಾರಿಕೆಗೆ ಅನುಮತಿ ಕೊಡುತ್ತಿಲ್ಲವೆ, ಪರಿಸರ ಉಳಿಸಿಕೊಂಡಿದ್ದಾರಾ’ ಎಂದು ಪ್ರಶ್ನಿಸಿದ ಅವರು, ‘ನನ್ನ ಮೇಲಿನ ವೈಯಕ್ತಿಕ ದ್ವೇಷಕ್ಕೆ ನೂರಾರು ಜನರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರಷ್ಟೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.