ಚನ್ನಪಟ್ಟಣ: ‘ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡುವ ಕುರಿತು ಈ ಕ್ಷಣದವರೆಗೆ ಯಾವುದೇ ಒಪ್ಪಂದ ಆಗಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಎರಡು ಸಲ ಗೆದ್ದಿದೆ. ಹಾಗಾಗಿ, ಕಾರ್ಯಕರ್ತರ ಒಮ್ಮತವಿಲ್ಲದೆ ನಾನು ಟಿಕೆಟ್ ಬಗ್ಗೆ ನಿರ್ಧಾರ ಮಾಡಲು ಸಾಧ್ಯವಿಲ್ಲ. ನಿಖಿಲ್ ಸ್ಪರ್ಧೆ ಬಗ್ಗೆಯೂ ತೀರ್ಮಾನಿಸಿಲ್ಲ’ ಎಂದು ಜೆಡಿಎಸ್ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿಗೆ ಗುರುವಾರ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು, ನಂತರ ಟಿಕೆಟ್ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ಬಿಜೆಪಿ ಹಿತದೃಷ್ಟಿಯಿಂದ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡುವಂತೆ ಸ್ಥಳೀಯ ಮುಖಂಡರು ಒತ್ತಾಯಿಸುತ್ತಿದ್ದಾರೆ. ಅದನ್ನು ನಾನು ತಪ್ಪು ಎನ್ನಲಾರೆ. ಆದರೆ, ಈ ಬಗ್ಗೆ ನಾನೂ ತಕ್ಷಣ ತೀರ್ಮಾನಿಸಲಾಗದು’ ಎಂದರು.
‘ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಯೋಗೇಶ್ವರ್ ಅವರನ್ನೇ ಮೊದಲು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೆವು. ಎರಡು ಪಕ್ಷ ಒಂದಾದರೆ ಗೆಲುವು ಸುಲಭ. ನೀವೇ ಚುನಾವಣೆಗೆ ಸ್ಪರ್ಧಿಸಿ ಎಂದು ಏಳೆಂಟು ತಿಂಗಳ ಹಿಂದೆಯೇ ನಾನು ಅವರಿಗೆ ಹೇಳಿದ್ದೆ. ಆದರೆ, ಅಮಿತ್ ಶಾ ಕರೆ ಮಾಡಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಿ ಎಂದರು. ಹಾಗಾಗಿ, ಮಂಜುನಾಥ್ ಅಭ್ಯರ್ಥಿಯಾದರು’ ಎಂದು ಹೇಳಿದರು.
‘ಬಿಜೆಪಿ -ಜೆಡಿಎಸ್ ಮೈತ್ರಿಗೆ ನಾನೇ ಕಾರಣ’ ಎಂಬ ಯೋಗೇಶ್ವರ್ ಹೇಳಿಕೆ ಕುರಿತು, ‘ಮೈತ್ರಿಗೆ ಯಾರು ಮೂಲ ಕಾರಣ ಎಂಬುದನ್ನು ಬೀದಿಯಲ್ಲಿ ಚರ್ಚಿಸುವುದಿಲ್ಲ’ ಎಂದರು.
ಯೋಗೇಶ್ವರ್‌ಗೆ ಟಿಕೆಟ್ ಕೊಡುವಂತೆ ಆಗ್ರಹ:
ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಾ ಚುನಾವಣೆಗೆ ಕಾರ್ಯಕರ್ತರನ್ನು ಅಣಿಗೊಳಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಮುಖಂಡರು ಚನ್ನಪಟ್ಟಣದಲ್ಲಿ ಸಭೆ ನಡೆಸಿ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡುವಂತೆ ತಮ್ಮ ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿದ ಜಿಲ್ಲೆಯ ಬಿಜೆಪಿ ಮುಖಂಡರು, ‘ಜಿಲ್ಲೆಯಲ್ಲಿ ಚನ್ನಪಟ್ಟಣವು ಬಿಜೆಪಿಯ ನೆಲೆಯಾಗಿದೆ. ಕ್ಷೇತ್ರದಲ್ಲಿ ಯೋಗೇಶ್ವರ್ ಪರ ಜನಾಭಿಪ್ರಾಯವಿದೆ. ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಒಂದಾದ ಚನ್ನಪಟ್ಟಣವನ್ನು ಮಿತ್ರಪಕ್ಷವಾದ ನಮಗೆ ಜೆಡಿಎಸ್ ಬಿಟ್ಟು ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.