ರಾಮನಗರ: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಚನ್ನಪಟ್ಟಣ ನಿವಾಸಿಗಳ ಪೈಕಿ ಮೂವರು ನೇಪಾಳದ ಸಿಮಿಕೋಟ್ ಪ್ರದೇಶದಲ್ಲಿ ಸಿಲುಕಿದ್ದಾರೆ.
ಚನ್ನಪಟ್ಟಣದ ಜೆಡಿಎಸ್ ಮುಖಂಡರಾದ ಶಿವರಾಮು, ರಂಗಸ್ವಾಮಿ ಹಾಗೂ ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ಮಲ್ಲೇಶ್ ಸಂಕಷ್ಟದಲ್ಲಿ ಸಿಲುಕಿದವರು. ಇವರ ಜೊತೆಯೇ ತೆರಳಿದ್ದ ಬೇವೂರು ರಾಮಕೃಷ್ಣ ಎಂಬುವರು ಅನಾರೋಗ್ಯದ ಕಾರಣ ಎರಡು ದಿನದ ಹಿಂದಷ್ಟೇ ಮನೆಗೆ ವಾಪಸ್ ಆಗಿದ್ದರು.
ಇವರೆಲ್ಲರೂ ಜೂನ್ 21ರಂದು ಚನ್ನಪಟ್ಟಣ ದಿಂದ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. ಯಾತ್ರೆ ಮುಗಿಸಿ ವಾಪಸ್ ಆಗುವ ಮಾರ್ಗದಲ್ಲಿ ನೇಪಾಳದ ಸಿಮಿಕೋಟ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಲ್ಲಿಯೇ ಸಿಲುಕಿದ್ದಾರೆ. ಶಂಕರ್ ಟ್ರಾವೆಲ್ಸ್ ಏಜೆನ್ಸಿ ಮೂಲಕ ಅವರು ಪ್ರವಾಸಕ್ಕೆ ತೆರಳಿದ್ದರು.
ಈ ಸಂಬಂಧ ಸಂತ್ರಸ್ಥ ಕುಟುಂಬದ ಸದಸ್ಯರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮವರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೋರಿದರು. ವಿಶೇಷ ವಿಮಾನದ ಮೂಲಕ ಇವರನ್ನು ಕರೆತರಲು ವ್ಯವಸ್ಥೆ ಮಾಡುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ರಮೇಶ್ ಗೌಡ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.