ಬೆಂಗಳೂರು: ಶಾಲಾ ಪಠ್ಯಗಳಿಂದ ಟಿಪ್ಪು ಸುಲ್ತಾನ್ ಕುರಿತ ಇತಿಹಾಸ ಅಧ್ಯಾಯವನ್ನು ತೆಗೆದು ಹಾಕುವ ಬಗ್ಗೆ ಪರಿಶೀಲಿಸಲಾಗುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ಸೂಚಿಸಿದೆ.
ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ, ಟಿಪ್ಪು ಜಯಂತಿ ರದ್ದು ಮತ್ತು ಪಠ್ಯದಿಂದ ಟಿಪ್ಪು ವಿಷಯ ಕೈಬಿಡುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಟಿಪ್ಪುವಿಗೆ ಸಂಬಂಧಪಟ್ಟ ವಿಷಯವನ್ನು ಶೇ 101ರಷ್ಟು ತೆಗೆದು ಹಾಕುವುದಾಗಿ ತಿಳಿಸಿದರು. ಬಳಿಕ ಸಮಜಾಯಿಷಿ ನೀಡಿದ ಅವರು, ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಅಲ್ಲದೆ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವುದಿಲ್ಲ. ಈ ಸಂಬಂಧವಾಗಿ ಹಿಂದಿನ ಸರ್ಕಾರದ ಎಲ್ಲಾ ಆದೇಶಗಳನ್ನೂ ವಾಪಸ್ ಪಡೆಯಲಾಗುತ್ತದೆ ಎಂದು ಹೇಳಿದರು.
‘ಇತಿಹಾಸ ಪಠ್ಯ ಪುಸ್ತಕಗಳಲ್ಲಿರುವ ಟಿಪ್ಪುವಿನ ಅಧ್ಯಾಯ ತೆಗೆಯುವಿರೇ’ ಎಂಬ ಮರು ಪ್ರಶ್ನೆಗೆ, ‘ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರು ಶಾಲಾ ಪಠ್ಯದಿಂದ ಟಿಪ್ಪುವಿನ ಕುರಿತ ಪಾಠಗಳನ್ನು ತೆಗೆದು ಹಾಕಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಮನವಿ ಪತ್ರ ನೀಡಿದ್ದರು.
ಟಿಪ್ಪು ಸುಲ್ತಾನ್ ಪಠ್ಯದ ಕುರಿತು ಇತಿಹಾಸ ಪಠ್ಯಪುಸ್ತಕ ರಚನಾ ಸಮಿತಿ ಸಭೆಯನ್ನು ಕರೆದು ಆ ಸಭೆಗೆ ಇಬ್ಬರು ಶಾಸಕರನ್ನು ಆಹ್ವಾನಿಸಿ ಈ ಪಠ್ಯದ ಅಗತ್ಯತೆ ಹಾಗೂ ಅದನ್ನು ಉಳಿಸಿಕೊಳ್ಳುವ ಇಲ್ಲವೇ ತೆಗೆದುಹಾಕುವ ಸಾಧಕ ಬಾಧಕಗಳ ಕುರಿತಂತೆ ಮೂರು ದಿನಗಳಲ್ಲಿ ವರದಿ ಸಲ್ಲಿಸಲು ಸಚಿವ ಸುರೇಶ್ ಕುಮಾರ್ ಅವರು ಈಗಾಗಲೇ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.