ಸಾಗರ: ಸಮೀಪದ ಹೆಗ್ಗೋಡಿನ ಚರಕ ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಭೀಮನಕೋಣೆಯ ಕವಿ-ಕಾವ್ಯ ಟ್ರಸ್ಟ್ ನ ಸಹಯೋಗದೊಂದಿಗೆ ಫೆ.8ರಿಂದ 10ವರೆಗೆ ಚರಕ ಉತ್ಸವ-2019 ನ್ನು ಹಮ್ಮಿಕೊಂಡಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ, "ಫೆ.8ರಂದು ಸಂಜೆ 6ಕ್ಕೆ ಚರಕದ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ. ದಯಾನಂದ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ನಂತರ ಸಿದ್ದಾಪುರದ ಶ್ರೀ ಅನಂತ ಕಲಾ ಪ್ರತಿಷ್ಠಾನದಿಂದ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನವಿದೆ ಎಂದರು.
ಫೆ.9ರಂದು ಬೆಳಿಗ್ಗೆ 10.30ಕ್ಕೆ ಹೊನ್ನೇಸರ ಗ್ರಾಮದಲ್ಲಿರುವ ಶ್ರಮಜೀವಿ ಆಶ್ರಮದಲ್ಲಿ ‘ಕೊಡು ಕೊಳ್ಳುವವರ ಸಮಾವೇಶ’ ನಡೆಯಲಿದ್ದು ಬೆಂಗಳೂರಿನ ಜವಳಿ ಆಯುಕ್ತ ಡಾ.ಎಂ.ಆರ್. ರವಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿನ್ಯಾಸಕಾರ ಪ್ರಸಾದ್ ಬಿದ್ದಪ್ಪ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಜೆ 6.30ಕ್ಕೆ ಚರಕದ ಆವರಣದಲ್ಲಿ ನಾದ ಮಣಿನಾಲ್ಕೂರು ಅವರಿಂದ ‘ಕತ್ತಲ ಹಾಡು’ ಗಾಯನ ಕಾರ್ಯಕ್ರಮ, ನಂತರ ಸಿಂಗಲ್ ಥಿಯೇಟರ್ ಮತ್ತು ಬಾ ಸೃಷ್ಟಿ ತಂಡದಿಂದ ‘ಕಮಲಾದೇವಿ ಚಟ್ಟೋಪಾಧ್ಯಾಯ ಕೆಲವು ನೆನಪು’ (ರಂಗರೂಪ: ವೈದೇಹಿ, ನಿರ್ದೇಶನ: ಭಾಗೀರಥಿ ಬಾಯಿ) ರಂಗರೂಪ ಪ್ರದರ್ಶನಗೊಳ್ಳಲಿದೆ ಎಂದರು.
ಫೆ.10ರಂದು ಬೆಳಿಗ್ಗೆ 10.30ಕ್ಕೆ ಶ್ರಮಜೀವಿ ಆಶ್ರಮದಲ್ಲಿ ‘ಕಲೆ, ಕುಶಲಕರ್ಮ ಮತ್ತು ಶ್ರಮ ಸಂಸ್ಕೃತಿ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಸಂಸ್ಕೃತಿ ಚಿಂತಕ ಡಾ. ರಾಜೇಂದ್ರ ಚೆನ್ನಿ, ಲೇಖಕಿ ಡಾ.ಎಚ್.ಎಸ್. ಅನುಪಮ, ಸುವರ್ಣ ಟೀಕಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಅಂದು ಸಂಜೆ 6ಕ್ಕೆ ಚರಕದ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸಂಸದ ಬಿ.ವೈ. ರಾಘವೇಂದ್ರ ಅವರು ಕಾಯಕ ಪ್ರಶಸ್ತಿ ವಿತರಿಸಲಿದ್ದು ಶಾಸಕ ಎಚ್. ಹಾಲಪ್ಪ ಹರತಾಳು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಪಟೇಲ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾತ್ರಿ 7.30ಕ್ಕೆ ಚರಕದ ಕಲಾವಿದರಿಂದ ‘ಕಥಾ ಕಣಜ’ (ರಂಗರೂಪ: ಸುಧಾ ಆಡುಕಳ, ನಿರ್ದೇಶನ: ಡಾ.ಶ್ರೀಪಾದ ಭಟ್) ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಚರಕ ಸಂಸ್ಥೆಯ ರಮೇಶ್, ದ್ರಾಕ್ಷಾಯಿಣಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.