ಮೂಡಿಗೆರೆ: ತಾಲ್ಲೂಕಿನ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಗಿಡ ಮರಗಳು ಸುಟ್ಟು ಹೋಗಿವೆ.
ಅಣ್ಣಪ್ಪಸ್ವಾಮಿ ದೇವಾಲಯದ ಸಮೀಪದಲ್ಲಿರುವ ಅರಣ್ಯದ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಂಗಳವಾರ ತಡರಾತ್ರಿ ಬೆಂಕಿಯ ಜ್ವಾಲೆ ಬಹುದೂರದವರೆಗೂ ಕಾಣುತ್ತಿತ್ತು. ಕಾಳ್ಗಿಚ್ಚಿನಿಂದಾಗಿ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗುವುದರಿಂದ ಹುಲ್ಲಿನ ಪೊದೆಗಳಲ್ಲಿ ಗೂಡು ಕಟ್ಟಿರುವ ಪಕ್ಷಿಗಳು, ಪೊದೆಗಳ ನಡುವೆ ಇರುವ ಕಾಡುಕುರಿ, ಮೊಲದ ಮರಿಗಳು, ಚಿಟ್ಟೆ ಮತ್ತಿತರ ಕೀಟಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುವ ಅಪಾಯವಿದೆ.
ಐದು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯು ಬೆಂಕಿಯನ್ನು ನಂದಿಸುವಲ್ಲಿ ಯಶಸ್ಸಿಯಾಗಿತ್ತು. ಪುನಃ ಕಾಣಿಸಿಕೊಂಡಿರುವ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆದಿದೆ. ಘಾಟಿಯಲ್ಲಿ ಒಣಗಿ ನಿಂತಿರುವ ಹುಲ್ಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದ್ದು, ಹೆದ್ದಾರಿ ಬದಿಯಲ್ಲಿನ ಹುಲ್ಲನ್ನು ಸುಡುವ ಕಾರ್ಯ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.