ADVERTISEMENT

ಐದು ವರ್ಷದಲ್ಲಿ ₹ 5,685 ಕೋಟಿ ವಂಚನೆ

ಹೆಚ್ಚಿನ ಬಡ್ಡಿ, ದುಪ್ಪಟ್ಟು ಆಮಿಷಕ್ಕೆ ಹಣ ಕಳೆದುಕೊಂಡವರ ಸಂಖ್ಯೆ 19 ಲಕ್ಷ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 18:30 IST
Last Updated 11 ಜೂನ್ 2019, 18:30 IST
   

ಬೆಂಗಳೂರು: ಮದುವೆ, ವಿದ್ಯಾಭ್ಯಾಸ, ಮನೆ ನಿರ್ಮಾಣ, ಧಾರ್ಮಿಕ ಯಾತ್ರೆ... ಹೀಗೆ ಹಲವು ಉದ್ದೇಶಕ್ಕಾಗಿ ಜನರು ಕೂಡಿಟ್ಟ ಹಣವನ್ನು ಹೆಚ್ಚಿನ ಬಡ್ಡಿ ಹಾಗೂ ಹಣ ದುಪ್ಪಟ್ಟು ಆಮಿಷವೊಡ್ಡಿ ಸಂಗ್ರಹಿಸುತ್ತಿರುವ ಕಂಪನಿಗಳು, ದಿಢೀರ್ ಬಾಗಿಲು ಬಂದ್ ಮಾಡಿ ವಂಚಿಸುತ್ತಿವೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿ ರಾಜ್ಯದ ವಿವಿಧ ನಗರಗಳಲ್ಲಿ ಶಾಖಾ ಕಚೇರಿಗಳನ್ನು ತೆರೆದು ವಹಿವಾಟು ನಡೆಸುವ ಕಂಪನಿಗಳು, ಆರಂಭದಲ್ಲಿ ಗ್ರಾಹಕರಿಗೆ ಉಡುಗೊರೆ ಹಾಗೂ ಬಡ್ಡಿಯನ್ನೂ ನೀಡುತ್ತಿವೆ. ಯಾವಾಗಲೂ ಹೆಚ್ಚಿನ ಹಣ ಸಂಗ್ರಹವಾಗುತ್ತದೆಯೋ ಆವಾಗಲೇ ಕಂಪನಿಯ ಮುಖ್ಯಸ್ಥರು ನಾಪತ್ತೆಯಾಗುತ್ತಿರುವುದು ಪದೆಪದೇ ನಡೆಯುತ್ತಿದೆ.

ADVERTISEMENT

ಇಂಥ ಕಂಪನಿಗಳಿಂದ ವಂಚನೆಗೀಡಾದ ಜನ, ಆರಂಭದಲ್ಲಿ ಕಂಪನಿಯ ಕಚೇರಿ ಎದುರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಪೊಲೀಸರಿಗೂ ದೂರು ನೀಡುತ್ತಾರೆ. ವಾರ, ತಿಂಗಳು ಕಳೆದ ನಂತರ ಜನರ ಆಕ್ರೋಶವೂ ಕಡಿಮೆ ಆಗುತ್ತದೆ. ಇಂಥ ಪ್ರಕರಣದಲ್ಲಿ ಇದುವರೆಗೂ ಯಾವ ಕಂಪನಿಯಿಂದಲೂ ಜನರಿಗೆ ಬರಬೇಕಾದ ಹಣ ವಾಪಸ್ ಬಂದಿಲ್ಲ.

ಈಗ ಐಎಂಎ ಸಮೂಹ ಕಂಪನಿಯಿಂದಲೂ ಜನರಿಗೆ ವಂಚನೆಯಾಗಿದ್ದು, ಹಣ ವಾಪಸ್ ಕೊಡಿಸುವಂತೆ ಗ್ರಾಹಕರು ಪ್ರತಿಭಟನೆ ಮಾಡುತ್ತಿದ್ದಾರೆ.

18 ಕಂಪನಿಗಳ ವಿರುದ್ಧ ದೂರು: 2013ರಿಂದ 2019ರ (ಫೆಬ್ರುವರಿ) ಅವಧಿಯಲ್ಲಿ ರಾಜ್ಯದಲ್ಲಿ ಹುಟ್ಟಿಕೊಂಡಿದ್ದ 18 ಕಂಪನಿಗಳಿಂದ ₹5,685 ಕೋಟಿ ರೂಪಾಯಿ ವಂಚನೆಯಾಗಿದೆ. ಅಂಥ ಕಂಪನಿಗಳ ವಿರುದ್ಧ 480 ಪ್ರಕರಣಗಳು ದಾಖಲಾಗಿವೆ.

ಆ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಇಂಥ ಕಂಪನಿಗಳಿಂದ 19 ಲಕ್ಷಕ್ಕೂ ಹೆಚ್ಚು ಮಂದಿಗೆ ವಂಚನೆ ಆಗಿದೆ’ ಎಂದರು.

‘ಸರ್ಕಾರದಿಂದ ಅನುಮತಿ ಪಡೆದುಕೊಂಡೇ ಇಂಥ ಕಂಪನಿಗಳು ಸ್ಥಾಪನೆಯಾಗುತ್ತಿವೆ. ಆದರೆ, ಕಾನೂನುಬದ್ಧವಾಗಿ ವ್ಯವಹಾರ ಮಾಡುತ್ತಿಲ್ಲ. ಗ್ರಾಹಕರಿಗೆ ನಕಲಿ ರಶೀದಿಗಳನ್ನು ಕೊಡುತ್ತಿವೆ. ಹೀಗಾಗಿ ಕಂಪನಿಗಳ ವಿರುದ್ಧ ಪುರಾವೆಗಳನ್ನು ಸಂಗ್ರಹಿಸುವುದು ಕಷ್ಟವಾಗುತ್ತಿದೆ’ ಎಂದು ಹೇಳಿದರು.

‘ಕಂಪನಿಗಳ ಮಾಲೀಕರು, ಏಕಾಏಕಿ ಬಾಗಿಲುಗಳನ್ನು ಬಂದ್ ಮಾಡುವುದಿಲ್ಲ. ಬದಲಿಗೆ, ಸಾಕ್ಷ್ಯಗಳನ್ನು ನಾಶಪಡಿಸಿಯೇ ಬಂದ್ ಮಾಡುತ್ತಾರೆ. ವಂಚನೆ ಹಣದಲ್ಲಿ ಖರೀದಿ ಮಾಡಿದ ಆಸ್ತಿಗಳನ್ನೂ ಮಾರಾಟ ಮಾಡಿರುತ್ತಾರೆ. ಆರೋಪಿಗಳನ್ನು ಬಂಧಿಸಿದರೂ ಹೂಡಿಕೆದಾರರಿಗೆ ಹಣ ಸಿಗುವ ಸಾಧ್ಯತೆ ಕಡಿಮೆ’ ಎಂದು ಅವರು ವಿವರಿಸಿದರು.

ಹೂಡಿಕೆ ಮುನ್ನ ಎಚ್ಚರ

*ಹೂಡಿಕೆದಾರರು ಯಾವುದೇ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಠೇವಣಿಗಳು ಅಧಿಕೃತವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು

*ಸಂಸ್ಥೆಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ, ರಿಜಿಸ್ಟ್ರಾರ್ ಆಫ್ ಕಂಪನೀಸ್ ಮತ್ತು ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿಯಿಂದ ಅನುಮತಿ ಪಡೆದುಕೊಂಡಿದೆಯೇ ಎಂಬುದನ್ನೂ ತಿಳಿದುಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.