ಮಡಿಕೇರಿ: ತಲಕಾವೇರಿಯಲ್ಲಿ ಸಂಭವಿಸಿದ್ದ ಬೆಟ್ಟ ಕುಸಿತದಿಂದ ಕ್ಷೇತ್ರದ ಅರ್ಚಕ ನಾರಾಯಣ ಆಚಾರ್ ಮೃತರಾಗಿದ್ದು ಅವರ ಪುತ್ರಿಯರಿಗೆ ವಿತರಿಸಲಾಗಿದ್ದ ಪರಿಹಾರದ ಚೆಕ್ ವಿವಾದವು ಕೊನೆಗೂ ಇತ್ಯರ್ಥವಾಗುವ ಹಂತಕ್ಕೆ ಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಸೂಚನೆಯಂತೆ ಶೆನೋನ್ ಫರ್ನಾಂಡಿಸ್ (ಶಾರದಾ ಆಚಾರ್) ಹಾಗೂ ನಮಿತಾ ನಝರತ್ (ನಮಿತಾ ಆಚಾರ್) ಹೆಸರಿಗೇ ಚೆಕ್ ನೀಡಲು ಕೊಡಗು ಜಿಲ್ಲಾಡಳಿತ ನಿರ್ಧರಿಸಿದೆ.
ಶನಿವಾರ ಸಚಿವರನ್ನು ಖುದ್ದು ಭೇಟಿ ಮಾಡಿದ ನಾರಾಯಣ ಆಚಾರ್ ಪುತ್ರಿಯರು, ವಿದೇಶಕ್ಕೆ ವಾಪಸ್ಸಾಗಬೇಕಿದ್ದು, ಪರಿಹಾರದ ಚೆಕ್ ವಿತರಿಸುವಂತೆ ಮನವಿ ಮಾಡಿದರು. ತಹಶೀಲ್ದಾರ್ ಮಹೇಶ್‌ಗೆ ಸೂಚನೆ ನೀಡಿದ ಸಚಿವರು, ಬದಲಾದ ಹೆಸರಿಗೆ ಚೆಕ್ ನೀಡುವಂತೆ ಆದೇಶಿಸಿದರು.
‘ಪಾಸ್‌ಪೋರ್ಟ್‌ನ ಮೂಲ ಪ್ರತಿ ಸಲ್ಲಿಸಿದ ತಕ್ಷಣವೇ ಪರಿಹಾರದ ಚೆಕ್ ವಿತರಣೆ ಮಾಡಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾರಾಯಣ ಆಚಾರ್ ಅವರ ಪುತ್ರಿಯರು, ಭಾಗಮಂಡಲ ವ್ಯಾಪ್ತಿಯ ಶಾಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಶಾಲಾ ದಾಖಲಾತಿಯಲ್ಲಿ ಶಾರದಾ ಆಚಾರ್, ನಮಿತಾ ಆಚಾರ್ ಎಂದೇ ಹೆಸರಿದೆ. ಅದರ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಮಹೇಶ್ ಹೇಳಿದರು.
ಏನಿದು ಚೆಕ್ ವಿವಾದ?
ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾದ ಬಳಿಕ ಸಚಿವ ವಿ.ಸೋಮಣ್ಣ ಅವರು ಇಬ್ಬರು ಪುತ್ರಿಯರಿಗೆ ತಲಾ ₹ 2.5 ಲಕ್ಷದಂತೆ ಪರಿಹಾರ ಚೆಕ್ ವಿತರಿಸಿದ್ದರು. ಭಾಗಮಂಡಲ ಪೊಲೀಸ್ ಠಾಣೆಗೆ ಶಾರದಾ ಆಚಾರ್, ನಮಿತಾ ಆಚಾರ್ ಎಂಬ ಹೆಸರಿನಲ್ಲಿ ಪುತ್ರಿಯರು ನಾಪತ್ತೆಯ ದೂರು ಸಲ್ಲಿಸಿದ್ದರಿಂದ ತಹಶೀಲ್ದಾರ್ ಕಚೇರಿಯಿಂದ ಆ ಹೆಸರಿಗೆ ಚೆಕ್ ಬರೆಯಲಾಗಿತ್ತು. ಆದರೆ, ಈ ಹೆಸರಿನಲ್ಲಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ. ಹೆಸರು ಬದಲಾಗಿದ್ದು, ಶೆನೋನ್ ಫರ್ನಾಂಡಿಸ್, ನಮಿತಾ ನಝರತ್ ಎಂಬ ಹೆಸರಿನಲ್ಲಿ ಚೆಕ್ ಬರೆಯಲು ಕೋರಿದ್ದರು. ಚೆಕ್ ಅನ್ನು ಭಾಗಮಂಡಲ ನಾಡಕಚೇರಿಗೆ ವಾಪಸ್ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.