ಬೆಂಗಳೂರು: ‘ರಾಜ್ಯದ ರೈತರ ಪರ ಧ್ವನಿ ಎತ್ತಲು ಸಾಧ್ಯವಾಗದೇ ಇದ್ದರೆ ರೈತ ಪರ ಎಂದು ಹೇಳಿಕೊಳ್ಳುವ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ಕರ್ನಾಟಕವನ್ನು ಏಕೆ ಪ್ರತಿನಿಧಿಸುತ್ತಿದ್ದಾರೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
ನಬಾರ್ಡ್ ಅಲ್ಪಾವಧಿ ಕೃಷಿ ಸಾಲದ ಪುನರ್ಧನ ಮಿತಿ ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿರುವ ಕಾರಣ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಕೇಂದ್ರ ಸಚಿವರು ಒಮ್ಮೆಯೂ ಬಾಯಿ ಬಿಟ್ಟಿಲ್ಲ ಎಂದರು.
ಕೃಷಿ ಸಾಲದ ಪುನರ್ಧನ ಮಿತಿಯನ್ನು ನಬಾರ್ಡ್ ಹಠಾತ್ ಇಳಿಕೆ ಮಾಡಿದೆ. ನಬಾರ್ಡ್ ಕೇಂದ್ರ ಸರ್ಕಾರದ ಅಧೀನದಲ್ಲೇ ಬರುವುದರಿಂದ ಕೇಂದ್ರ ಸರ್ಕಾರವೇ ದ್ವೇಷದ ಕಾರಣಕ್ಕೆ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಬಾರ್ಡ್‌ನಿಂದ ₹9,200 ಕೋಟಿ ನಿರೀಕ್ಷೆಯಲ್ಲಿ ಇದ್ದೆವು. ಆದರೆ ಕಳೆದ ವರ್ಷಕ್ಕಿಂತ ಶೇ 58ರಷ್ಟು ಕಡಿಮೆ ಬಂದಿದೆ ಎಂದರು.
ಇದರಿಂದಾಗಿ ಸಹಕಾರ ಸಂಘಗಳಿಂದ ಬಡ್ಡಿರಹಿತ ಅಲ್ಪಾವಧಿ ಬೆಳೆ ಸಾಲ ನೀಡುವುದು ಕಷ್ಟವಾಗಲಿದೆ. ಕೃಷಿ ಕ್ಷೇತ್ರದ ಮೇಲೆ ಅಡ್ಡಪರಿಣಾಮ ಬೀರಲಿದೆ. ಆಹಾರ ಧಾನ್ಯ ಉತ್ಪಾದನೆಯೂ ಕುಸಿತವಾಗಲಿದೆ. ಹೊಸ ರೈತರಿಗೆ ಸಾಲ ಸಿಗುವುದಿಲ್ಲ. ಖಾಸಗಿಯವರ ಬಳಿ ಹೆಚ್ಚು ಬಡ್ಡಿಗೆ ಸಾಲ ಪಡೆಯಬೇಕಾಗುತ್ತದೆ. ರೈತರಿಗೆ ಶಕ್ತಿ ತುಂಬುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ. ಲಾಭದಾಯಕ ವ್ಯವಹಾರಗಳಿಗೆ ಮಾತ್ರ ಸಾಲ ಕೊಡುತ್ತೇವೆ ಎನ್ನುವುದಾದರೆ ಸರ್ಕಾರಗಳೇನು ಕಾರ್ಪೊರೇಟ್ ಸಂಸ್ಥೆಗಳೇ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.
ಈ ಹಿಂದೆ ಅತಿವೃಷ್ಟಿಗೆ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸದ ಕಾರಣ ಸುಪ್ರೀಂ ಕೋರ್ಟ್‌ನ ಮೊರೆಗೆ ಹೋಗಿದ್ದೆವು. ಆ ಬಳಿಕ ಕೇಂದ್ರ ಪರಿಹಾರ ಬಿಡುಗಡೆ ಮಾಡಿತ್ತು. ಈಗ ಮತ್ತೆ ತಾರತಮ್ಯ ಮತ್ತು ದ್ವೇಷದ ರಾಜಕಾರಣ ಮಾಡಿದರೆ ಕಾನೂನು ಹೋರಾಟ ಸೇರಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಅವರು ಎಚ್ಚರಿಕೆ ನೀಡಿದರು.
ಇದೇ 26ರಿಂದ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸಮ್ಮೇಳನ ಆರಂಭವಾಗಲಿದೆ. ಇದೇ ವೇಳೆ ಸಹಕಾರ ಕ್ಷೇತ್ರದ ನಿಯೋಗ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದೆ. ಸಮಯಾವಕಾಶ ಸಿಕ್ಕರೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಈ ಸಾಲಿಗೆ ಕೃಷಿ ಪತ್ತಿನ ಸಂಸ್ಥೆಗಳ ಮೂಲಕ ಮಂಜೂರು ಮಾಡಲು ಉದ್ದೇಶಿಸಿರುವ ₹25,000 ಕೋಟಿ ಸಾಲ ವಿತರಿಸಲು ಸಾಧ್ಯವಾಗುವುದಿಲ್ಲ. ರಾಜ್ಯದಲ್ಲಿ ಸಹಕಾರ ಬ್ಯಾಂಕ್‌ಗಳಲ್ಲಿ ಠೇವಣಿಗಳು ಮತ್ತು ಸಂಪನ್ಮೂಲಗಳ ಕೊರತೆ ಇರುವುದರಿಂದ ಅಲ್ಪಾವಧಿ ಕೃಷಿ ಸಾಲ ವಿತರಣೆ ಕುಂಠಿತವಾಗಿದೆ. ಇದು ರಾಜ್ಯದ ಹಣಕಾಸಿನ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.