ADVERTISEMENT

ಚೇತನ್‌ ಅಹಿಂಸಾ ವೀಸಾ ರದ್ದು ಕ್ರಮಕ್ಕೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 19:10 IST
Last Updated 24 ಏಪ್ರಿಲ್ 2023, 19:10 IST
ಚೇತನ್‌ ಅಹಿಂಸಾ
ಚೇತನ್‌ ಅಹಿಂಸಾ   

ಬೆಂಗಳೂರು: ನಟ ಚೇತನ್‌ ಎ. ಕುಮಾರ್ ಅಲಿಯಾಸ್ ಚೇತನ್‌ ಅಹಿಂಸಾ ಅವರ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್‌ ಅನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದ್ದು, ಜೂನ್‌ 2ರವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದೆ.

ಈ ಸಂಬಂಧ ಚೇತನ್‌ ಎ. ಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.  

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್‌ ಹಾಗೂ ರಾಜ್ಯದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಂ.ಅರುಣ್‌ ಶ್ಯಾಮ್‌ ವಾದ ಮಂಡಿಸಿ, ‘ಅರ್ಜಿದಾರರು ಅನೇಕ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ ಮತ್ತು ಪದೇ ಪದೇ ನ್ಯಾಯಾಂಗ ನಿಂದನೆಯಾಗುವಂತಹ ಹೇಳಿಕೆ ನೀಡುವುದು ಹಾಗೂ ಸಮುದಾಯಗಳ ಮಧ್ಯೆ ವಿದ್ವೇಷದ ನುಡಿಗಳನ್ನು ಬಿತ್ತುವ ಕೆಲಸ ಮಾಡುತ್ತಿರುವ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಹಾಗಾಗಿ ಅರ್ಜಿದಾರರಿಗೆ ರಕ್ಷಣೆ ನೀಡಬಾರದು’ ಎಂದು ಪ್ರತಿಪಾದಿಸಿದರು.

ADVERTISEMENT

ಆದರೆ, ಅರ್ಜಿದಾರರ ಪರ ವಕೀಲರ ಮನವಿಯನ್ನು ಮನ್ನಿಸಿರುವ ನ್ಯಾಯಪೀಠ, ‘ಅರ್ಜಿದಾರರು ನ್ಯಾಯಾಂಗ ನಿಂದನೆಯಾಗುವಂತಹ ಮತ್ತು ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಯಾವುದೇ ಟ್ವೀಟ್‌ ಮಾಡುವಂತಿಲ್ಲ’ ಎಂದು ನಿರ್ಬಂಧ ವಿಧಿಸಿ ವಿಚಾರಣೆಯನ್ನು ಜೂನ್‌ 2ಕ್ಕೆ ಮುಂದೂಡಿದೆ.

ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ, ವಲಸೆ ವಿಭಾಗದ ಉಪ ನಿರ್ದೇಶಕರು, ಬೆಂಗಳೂರಿನ ವಿದೇಶಿ ನೋಂದಣಿ ಪ್ರಾದೇಶಿಕ ಕಚೇರಿ (ಎಫ್‌ಆರ್‌ಆರ್‌ಒ) ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಪ್ರಕರಣವೇನು?: ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪಕ್ಕೆ ಸಂಬಂಧಿಸಿದಂತೆ ಚೇತನ್‌ ಎ.ಕುಮಾರ್ ವಿರುದ್ಧ ಕ್ರಮ ಕೈಗೊಂಡಿದ್ದ ಕೇಂದ್ರ ಸರ್ಕಾರ, ಅವರ ಒಸಿಐ ಕಾರ್ಡ್‌ ಅನ್ನು 2023ರ ಮಾರ್ಚ್‌ 28ರಂದು ರದ್ದುಪಡಿಸಿತ್ತು. ಇದರಿಂದ ಗಡಿಪಾರು ಭೀತಿಗೆ ಒಳಗಾಗಿದ್ದ ಚೇತನ್‌ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

‘ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮ ಸಂವಿಧಾನದ 14 ಮತ್ತು 21ನೇ ವಿಧಿಗಳಿಗೆ ವಿರುದ್ಧವಾಗಿದೆ. ಅಂತೆಯೇ, ಏಕಪಕ್ಷೀಯ ಮತ್ತು ಕಾನೂನುಬಾಹಿರವಾಗಿದೆ. ಆದ್ದರಿಂದ, ನಾಗರಿಕ ಕಾಯ್ದೆ–1955ರ ಕಲಂ 7 ಡಿ (ಬಿ) ಮತ್ತು (ಇ) ಅನುಸಾರ ನನ್ನ ವಿರುದ್ಧ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗದಂತೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.