ಬೆಂಗಳೂರು: ‘ನನ್ನ ಇಬ್ಬರು ಅಂಗವಿಕಲ ಮಕ್ಕಳು ನನ್ನ ಬದುಕಿಗೆ ಬಂದ ನಂತರ ನನ್ನ ಜಗತ್ತು ಮತ್ತು ನಾನು ಜಗತ್ತನ್ನು ನೋಡುವ ರೀತಿಯೇ ಬದಲಾಯಿತು. ಅಂತಹವರಿಗಾಗಿ ಎಲ್ಲರನ್ನೂ ಒಳಗೊಳ್ಳುವ ಸಮಾಜ ಕಟ್ಟುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬುದನ್ನು ಈ ಮಕ್ಕಳು ನನಗೆ ತೋರಿಸಿಕೊಟ್ಟರು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ರಾಜ್ಯ ಅಂಗವಿಕಲರ ಹಕ್ಕುಗಳ ಆಯುಕ್ತಾಲಯ, ರಾಮಯ್ಯ ಕಾನೂನು ಕಾಲೇಜು ಮತ್ತು ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ ಜಂಟಿ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ, ‘ಅಂಗವಿಕಲರಿಗೆ ಸಮಾನ ಅವಕಾಶ ರಾಷ್ಟ್ರೀಯ ವಿಚಾರ ಸಂಕಿರಣ’ವನ್ನು ಉದ್ಘಾಟಿಸಿದರು. 2014ರಲ್ಲಿ ತಾವು ದತ್ತು ಪಡೆದ ಇಬ್ಬರು ಅಂಗವಿಕಲ ಹೆಣ್ಣುಮಕ್ಕಳ ಬದುಕನ್ನು ಉದಾಹರಿಸಿ ಮಾತನಾಡಿದರು.
‘ನನ್ನ ಮಕ್ಕಳಾದ ಪ್ರಿಯಾಂಕ ಮತ್ತು ಮಾಹಿ ಇಬ್ಬರೂ ಅಂಗವಿಕಲರು. ಗಾಲಿಕುರ್ಚಿಯಲ್ಲೇ ಅವರಿಬ್ಬರ ಓಡಾಟ. ನಾನು ಸಿಜೆಐ ಆದ ಮೇಲೆ ನನ್ನ ಕಚೇರಿ ನೋಡಬೇಕು ಎಂದರು. ಕರೆದುಕೊಂಡು ಹೋದೆ. ಆದರೆ ನ್ಯಾಯಮೂರ್ತಿಗಳ ಛೇಂಬರ್‌ಗೆ ಹೋಗಲು ಎರಡು ದೊಡ್ಡ ಮೆಟ್ಟಿಲನ್ನು ಏರಬೇಕಿತ್ತು. ಮಕ್ಕಳನ್ನು ಗಾಲಿಕುರ್ಚಿ ಸಮೇತ ಮೇಲೆತ್ತಿ ಇಡಬೇಕಾಯಿತು. ಆನಂತರವೇ ಅಲ್ಲಿ ರ‍್ಯಾಂಪ್ ನಿರ್ಮಾಣ ಮಾಡಿದ್ದು’ ಎಂದರು.
ಇತ್ತೀಚೆಗೆ ಆಂಧ್ರ ಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ಅಂಗವಿಕಲರಿಗೆ ಸಮಾನ ಅವಕಾಶವನ್ನು ನಿರಾಕರಿಸಿ, ‘ಅಂಗವಿಕಲ ವೈದ್ಯರ ಬಳಿ ನೀವು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತೀರಾ?’ ಎಂದು ಟ್ವೀಟ್ ಮಾಡಿದ್ದರು. ನನ್ನ ಮೊದಲ ಪತ್ನಿಗೆ ಕ್ಯಾನ್ಸರ್ ಆಗಿತ್ತು. ಆಕೆಗೆ ಚಿಕಿತ್ಸೆ ನೀಡಿದ್ದ ಡಾ.ಸುರೇಶ್ ಅಡ್ವಾಣಿ ಅಂಗವಿಕಲರು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ವಿಧಾನ ರೂಪಿಸಿದ ಹೆಗ್ಗಳಿಕೆ ಅವರದ್ದು. ಅವರ ಚಿಕಿತ್ಸೆಯಲ್ಲಿ ನನ್ನ ಪತ್ನಿ 12 ವರ್ಷ ಬದುಕಿದ್ದರು. ಅಂಗವಿಕಲರಿಂದ ಏನೂ ಸಾಧ್ಯವಿಲ್ಲ ಎಂಬ ಮನಸ್ಥಿತಿ ಸರಿಯಲ್ಲ ಎಂಬುದಕ್ಕೆ ಇದು ನಿದರ್ಶನ ಎಂದರು.
‘ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೊಂದಿಗೂ ಸಮಾನವಾಗಿ ಬೆರೆಯುವ ಮತ್ತು ಎಲ್ಲರೊಂದಿಗೂ ಸಮಾನವಾಗಿ ಸ್ಪರ್ಧಿಸುವಂತಹ ಅವಕಾಶವನ್ನು ನಾವು ಅಂಗವಿಕಲರಿಗೆ ಸೃಷ್ಟಿಸಿಕೊಡಬೇಕು. ಎಲ್ಲೆಡೆ ಅವರು ಹೋಗಲು ಸಾಧ್ಯವಾಗುವಂತಹ ರ‍್ಯಾಂಪ್‌ಗಳು, ಬ್ರೈಲ್–ಸಂಜ್ಞಾ ಸೂಚನಾ ಫಲಕಗಳು ಮತ್ತು ಧ್ವನಿವರ್ಧಕಗಳ ಮೂಲಕ ಸೂಚನೆ ನೀಡುವ ವ್ಯವಸ್ಥೆ ಮಾಡಬೇಕು. ನನ್ನ ಮಕ್ಕಳನ್ನು ಸುಪ್ರೀಂ ಕೋರ್ಟ್‌ಗೆ ಕರೆದುಕೊಂಡು ಹೋದ ನಂತರ, ಅಲ್ಲಿರುವ ಇಂತಹ ವ್ಯವಸ್ಥೆ ಬಗ್ಗೆ ಪರಿಶೋಧನೆ ನಡೆಸಿದೆವು ಮತ್ತು ಅಗತ್ಯವಿದ್ದೆಡೆ ಅಂತಹ ವ್ಯವಸ್ಥೆಯನ್ನು ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.
ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ 800 ಮಂದಿ ಅಂಗವಿಕಲ ನೌಕರರು ಇದ್ದಾರೆ. ಅವರಿಗೆ ಅಗತ್ಯ ತರಬೇತಿ ನೀಡುವ ವ್ಯವಸ್ಥೆಯೂ ನಮ್ಮಲ್ಲಿದೆ.- ಎ.ವಿ.ಅಂಜಾರಿಯಾ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕರ್ನಾಟಕ
ಅಂಗವಿಕಲರಿಗಾಗಿ ಇರುವ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ಮೊದಲ ಹೆಜ್ಜೆಯಂದರೆ ಅವರು ಹೇಗೆ ಇದ್ದಾರೋ ಹಾಗೇ ಅವರನ್ನು ಒಪ್ಪಿಕೊಳ್ಳುವುದು-ಬಿ.ವಿ.ನಾಗರತ್ನ, ನ್ಯಾಯಮೂರ್ತಿ ಸುಪ್ರೀಂ ಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.