ADVERTISEMENT

44 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ನೀಡಲು ಆದ್ಯತೆ: ಯಡಿಯೂರಪ್ಪ

ಕಠಿಣ ನಿರ್ಬಂಧಗಳಿಂದ ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ– ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 13 ಮೇ 2021, 13:17 IST
Last Updated 13 ಮೇ 2021, 13:17 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ    

ಬೆಂಗಳೂರು:‘ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಕೊಡಲು ತೀರ್ಮಾನಿಸಿದ್ದೇವೆ. ಹೀಗಾಗಿ, 18ರಿಂದ 44 ವಯೋಮಾನದವರಿಗೆ ಲಸಿಕೆ ಅಭಿಯಾನವನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ’ ಎಂದುಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಭಾರೀ ನಿರೀಕ್ಷೆ ಇದ್ದಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕಠಿಣ ಕ್ರಮಗಳನ್ನು ತೆಗೆದುಕೊಂಡ ಬಳಿಕ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಆಗಿದೆ’ ಎಂದು ಹೇಳಿದರು.

ಕೋವಿಡ್‌ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಏನೇನು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ಕೋವಿಡ್‌ ನಿಯಂತ್ರಿಸಲು ಏ. 24ರಿಂದ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಬಳಿಕ, ಮೇ 10ರಿಂದ ಇನ್ನಷ್ಟು ಬಿಗಿ ಕ್ರಮಗಳನ್ನು ಜಾರಿಗೆ ತರಲಾಗಿದೆ. ಹೀಗಾಗಿ, ಮೇ 5ರಂದು 50 ಸಾವಿರ ದಾಟಿದ್ದ ಪ್ರಕರಣಗಳ ಸಂಖ್ಯೆ ಬುಧವಾರ 39,900ಕ್ಕೆ ಇಳಿದಿದೆ. ನಿರ್ಬಂಧ ಕ್ರಮಗಳಿಂದ ಇದು ಸಾಧ್ಯವಾಗಿದೆ’ ಎಂದರು.

‘ಬೆಂಗಳೂರು ಮತ್ತು ಕಲಬುರ್ಗಿಯಲ್ಲಿ ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಆಗಿತ್ತು. ಈ ಎರಡೂ ಕಡೆ ಈಗ ಪಾಸಿಟಿವ್‌ ದರ ಕಡಿಮೆ ಆಗಿದೆ’ ಎಂದರು.

‘ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಗಣನೀಯ ಪ್ರಮರಣದಲ್ಲಿ ಹೆಚ್ಚಿಸಿದ್ದೇವೆ. ಆಮ್ಲಜನಕ ಸೌಲಭ್ಯ ಇರುವ, ವೆಂಟಿಲೇಟರ್‌ ಸಹಿತ ಮತ್ತು ವೆಂಟಿಲೇಟರ್‌ ಇಲ್ಲದ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಅಲ್ಲದೆ, ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೆಚ್ಚಿಸುತ್ತಿದ್ದೇವೆ’ ಎಂದರು.

‘ಕೇಂದ್ರ ಸರ್ಕಾರ ರಾಜ್ಯಕ್ಕೆ ಆಮ್ಲಜನಕ ಹಂಚಿಕೆ ಪಾಲನ್ನು 965 ಟನ್‌ನಿಂದ 1,015 ಟನ್‌ಗೆ ಹಚ್ಚಿಸಿದೆ. ಇದರಲ್ಲಿ 765 ಟನ್‌ ನಮ್ಮ ರಾಜ್ಯದಲ್ಲಿಯೇ ಲಭ್ಯವಿದೆ. ಸಣ್ಣಪುಟ್ಟ ಘಟಕಗಳಿಂದ 60 ಟನ್ ಸಿಗುತ್ತಿದೆ. ಒಡಿಶಾದಿಂದ 160 ಟನ್‌, ವಿಶಾಖಪಟ್ಟಣದಿಂದ 30 ಟನ್‌ ಹಂಚಿಕೆ ಆಗಿದೆ. ರಾಜ್ಯಕ್ಕೆ ಹಂಚಿಕೆಯಾದ ಆಮ್ಲಜನಕ ಪ್ರಮಾಣವನ್ನು ಸಂಪೂರ್ಣ ಬಳಕೆ ಮಾಡುತ್ತಿದ್ದೇವೆ’ ಎಂದರು.

‘ಬಹ್ರರೇನ್‌ನಿಂದ 40 ಟನ್‌, ಕುವೈತ್‌ನಿಂದ 100 ಟನ್‌, ಜಮ್‌ಶೆಡ್‌ಪುರದಿಂದ 120 ಟನ್‌ ಆಮ್ಲಜನಕ ಲಭ್ಯವಾಗಿದೆ. ಕೇಂದ್ರ ಸರ್ಕಾರ 380 ಸಿಲಿಂಡರ್‌ಗಳನ್ನು ನೀಡಿದೆ. 350 ವಿದೇಶಗಳಿಂದ ಪಡೆಯಲಾಗಿದ್ದು, ಅವುಗಳನ್ನು ಪಡೆದು ಜಿಲ್ಲೆಗಳಿಗೆ ಹಂಚಲಾಗಿದೆ. 3 ಸಾವಿರ ಆಮ್ಲಜನಕ ಸಾಂದ್ರೀಕರಣ ಉಪಕರಣಗಳನ್ನೂ ಹಂಚಿದ್ದೇವೆ’ ಎಂದರು.

ಸಂಕಷ್ಟದಲ್ಲಿರುವ ಜನರಿಗೆ ರಾಜ್ಯ ಸರ್ಕಾರ ಪ್ಯಾಕೇಜ್‌ ನೀಡಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಕೊರೊನಾ ಪ್ರಕರಣದ ತೀವ್ರತೆ ಹೆಚ್ಚಿರುವುದರಿಂದ ಸದ್ಯ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಶ್ರಮಿಕ ವರ್ಗಕ್ಕೆ ತೊಂದರೆ ಆಗಿರುವುದು ಸರಿ. ಹೀಗಾಗಿ, ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡುತ್ತಿದ್ದೇವೆ. ಅಲ್ಲದೆ, ಕೇಂದ್ರ ಸರ್ಕಾರ ಮೇ ಮತ್ತು ಜೂನ್‌ ತಿಂಗಳಿಗೆ ಪ್ರತಿ ಬಿಪಿಎಲ್‌ ಫಲಾನುಭವಿಗೆ ತಲಾ 5 ಕಿಲೋ ಅಕ್ಕಿ ಕೊಡುತ್ತಿದೆ. ಅದನ್ನೂ ರಾಜ್ಯದಲ್ಲಿ ವಿತರಿಸುತ್ತಿದ್ದೇವೆ. ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣ ಕಡಿಮೆಯಾಗುತ್ತಿದೆ’ ಎಂದರು.

ಆಕ್ಸಿಜನ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. 124 ಆಕ್ಸಿಜನ್ ಘಟಕ ಸ್ಥಾಪಿಸಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ಕೇಂದ್ರದಿಂದ 1 ಸಾವಿರ ಟನ್ ಗೂ ಅಧಿಕ ಆಮ್ಲಜನಕ ಬರುತ್ತಿದೆ. 18-44ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಕೇಂದ್ರದಿಂದ 1015 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಆಗ್ತಿದೆ.1.10 ಕೋಟಿ ಡೋಸ್ ಲಸಿಕೆ ಪೂರೈಕೆ ಆಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಕೊರೊನಾ ಮೂರನೇ ಅಲೆ ಎದುರಿಸಲು ದೇವಿಶೆಟ್ಟಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದಲ್ಲಿ24 ಸಾವಿರ ಆಕ್ಸಿಜನ್ ಬೆಡ್ ಇವೆ.ವಿಶಾಖಪಟ್ಟಣ, ಒಡಿಶಾದಿಂದಲೂ ಆಕ್ಸಿಜನ್ ಬರ್ತಿದೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ. ಆಮ್ಲಜನಕ ಘಟಕ ಸ್ಥಾಪನೆಗೆ ಸಹಾಯಧನ ಒದಗಿಸಲಾಗುತ್ತಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ಸುಧಾರಿಸುತ್ತಿದೆ. ಜನರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.

ಕೇಂದ್ರದಿಂದ ಸಹಕಾರ

ಲಸಿಕೆ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಸಹಕಾರ ನೀಡುತ್ತಿದೆ. ಕೇಂದ್ರದೊಂದಿಗೆ ರಾಜ್ಯ ನಿರಂತರ ಸಂಪರ್ಕದಲ್ಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಲಸಿಕೆ ಪೂರೈಕೆಯಾಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹೇಳಿದರು.

ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ‘ಆಕ್ಸಿನೇಟೆಡ್‌ ಹಾಸಿಗೆಗಳು 60 ಸಾವಿರ ಲಭ್ಯ ಇದೆ. ಕೆಲವು ಕಡೆ ಅನಗತ್ಯವಾಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಹೀಗಾಗಿ, ಹಾಸಿಗೆಗಳ ಕೊರತೆ ಉಂಟಾಗಿದೆ’ ಎಂದರು.

ಕೋವಿಡ್‌ ರೋಗಿಗಳಿಗೆ ಹಾಸಿಗೆ ಹಂಚಿಕೆಯ ಉಸ್ತುವಾರಿ ವಹಿಸಿರುವ ಸಚಿವ ಆರ್‌. ಅಶೋಕ ಮಾತನಾಡಿ, ‘ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಹಾಸಿಗೆ ನೀಡಲು ಸತಾಯಿಸುತ್ತಿದ್ದರು. ರಿಯಾಲಿಟಿ ಚೆಕ್‌ ಮೂಲಕ ಆಸ್ಪತ್ರೆಗಳ ಒಳಗೆ ನೋಡಿದಾಗ ಹಾಸಿಗೆಗಳ ನಿಜವಾದ ಮಾಹಿತಿ ಸಿಕ್ಕಿತ್ತು. ಆ ಮೂಲಕ ಹೆಚ್ಚುವರಿ ಹಾಸಿಗೆಗಳನ್ನು ಪಡೆಯಲು ಸಾಧ್ಯವಾಯಿತು. ಅಲ್ಲದೆ, ಖಾಸಗಿ ಆಸ್ಪತ್ರೆಗಳು ಕಣ್ಣುಮುಚ್ಚಾಲೆ ಆಡುತ್ತಿದ್ದವು. ಅವುಗಳಿಂದ ಹಾಸಿಗೆಳನ್ನು 2,216 ಹೆಚ್ಚುವರಿಯಾಗಿ ಸಿಗುವಂತೆ ಮಾಡಿದ್ದೇವೆ. ಹೀಗಾಗಿ ಹೆಚ್ಚು ರೋಗಿಗಳಿಗೆ ಅನುಕೂಲ ಆಗಿದೆ’ ಎಂದರು.

ಕಾಲ್‌ ಸೆಂಟರ್‌ ಉಸ್ತುವಾರಿ ವಹಿಸಿರುವ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ‘ಹಾಸಿಗೆ ಹಂಚಿಕೆಯಾದ ಕೋವಿಡ್‌ ರೋಗಿಗೆ ತಕ್ಷಣ ಎಸ್‌ಎಂಎಸ್‌ ಹೋಗುವ ವ್ಯವಸ್ಥೆ ಮಾಡಿದ್ದೇವೆ. ಕಾಲ್‌ಸೆಂಟರ್‌ ಮಾರ್ಗಗಳ ಸಂಖ್ಯೆಯನ್ನು 120ಕ್ಕೆ ಹೆಚ್ಚಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ ಮಟ್ಟದಲ್ಲಿ ಟ್ರಾಯಾಜಿಂಗ್‌ ಮಾಡುತ್ತಿದ್ದೇವೆ. ಈಗ ಪ್ರಾಯೋಗಿಕವಾಗಿ ಪ್ರತಿ ವಾರ್ಡ್‌ ಒಂದೊಂದು ಕಡೆ ಈ ವ್ಯವಸ್ಥೆ ಆರಂಭಿಸಿದ್ದೇವೆ’ ಎಂದರು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿ, ‘ಮುಖ್ಯಮಂತ್ರಿ ಮತ್ತು ಸಂಪುಟ ಸಹೋದ್ಯೋಗಿಗಳ ಸಹಕಾರ, ಸಿಬ್ಬಂದಿಯ ಪರಿಶ್ರಮದಿಂದ ಕಳೆದ 15ದಿನಗಳಿಂದ ಕೋವಿಡ್‌ ನಿಯಂತ್ರಿಸಲು ಸಾಧ್ಯವಾಗಿದೆ. ಕೋವಿಡ್‌ ಮೂರನೇ ಅಲೆಯನ್ನು ಸಮರ್ಥವಾಗಿ ನಿಯಂತ್ರಿಸಲು ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದ್ದೇವೆ. ಕೆಲವೇ ದಿನಗಳಲ್ಲಿ ಸಮಿತಿಗೆ ಸದಸ್ಯರನ್ನು ನೇಮಿಸುತ್ತೇವೆ’ ಎಂದರು.

ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆ ವಿಷಯದಲ್ಲಿ ಸಮಸ್ಯೆ ಇಲ್ಲ ಎಂದಲ್ಲ. ಸಾಕಷ್ಟು ಸುಧಾರಣೆ ಆಗಿದೆ. ಕೇಂದ್ರ ಸರ್ಕಾರ ಕೂಡಾ ನೆರವು ನೀಡುತ್ತಿದೆ. ಕೋವಿಡ್‌ ನಿಯಂತ್ರಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಚಾಮರಾಜನಗರ ದುರಂತರ ವಿಷಯದಲ್ಲಿ ಹೈಕೋರ್ಟ್‌ನಲ್ಲಿ ಇನ್ನೂ ವಿಚಾರಣೆ ನಡೆಯುತ್ತಿರುವುದರಿಂದ, ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

-ಮುಖ್ಯಮಂತ್ರಿಬಿ.ಎಸ್‌. ಯಡಿಯೂರಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.